ಕ್ರಿಸ್‌ಮಸ್ ಸಂದರ್ಭದಲ್ಲಿ ರಿಲೀಸ್ ಆಗಿ ಭರ್ಜರಿ ಲಾಭ ಕಂಡ ಸಿನಿಮಾಗಳಿವು..
ಈ ಬಾರಿ ಕ್ರಿಸ್ಮಸ್ಗೆ ‘ಸಲಾರ್’ ಹಾಗೂ ‘ಡಂಕಿ’ ಸಿನಿಮಾ ರಿಲೀಸ್ ಆಗಲಿವೆ. ಈ ಸಿನಿಮಾಗಳ ಮಧ್ಯೆ ಕ್ಲ್ಯಾಶ್ ಏರ್ಪಡುತ್ತಿದೆ. ಎರಡೂ ಸಿನಿಮಾ ಚೆನ್ನಾಗಿದ್ದರೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬೆಳೆ ತೆಗೆಯಲಿವೆ. ಈ ಮೊದಲು ಕ್ರಿಸ್‌ಮಸ್ ಸಂದರ್ಭದಲ್ಲಿ ರಿಲೀಸ್ ಆದ ಹಲವು ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದಿದ್ದವು.
ಕ್ರಿಸ್‌ಮಸ್ ಸಂದರ್ಭದಲ್ಲಿ ದೊಡ್ಡ ಬಜೆಟ್ನ ಸಿನಿಮಾ ರಿಲೀಸ್ ಮಾಡಬೇಕು ಎಂದು ಹಲವು ನಿರ್ಮಾಪಕರು ಕನಸು ಕಂಡಿರುತ್ತಾರೆ. ಇದಕ್ಕೆ ಕಾರಣ ಸಾಲು ಸಾಲು ರಜೆ. ಈ ಸಂದರ್ಭದಲ್ಲಿ ಹಲವು ಕಂಪನಿಗಳು, ಶಾಲಾ-ಕಾಲೇಜುಗಳು ಒಂದು ವಾರ ರಜೆ ಘೋಷಣೆ ಮಾಡಿಬಿಡುತ್ತವೆ. ಹೀಗಾಗಿ ಅನೇಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುತ್ತಾರೆ. ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಪ್ರಭಾಸ್ ನಟನೆಯ ‘ಸಲಾರ್’ (Salaar) ಹಾಗೂ ಶಾರುಖ್ ಖಾನ್ ನಟನೆಯ ‘ಡಂಕಿ’ (Dunki) ಸಿನಿಮಾ ರಿಲೀಸ್ಗೆ ರೆಡಿ ಇವೆ. ಈ ಎರಡೂ ಸಿನಿಮಾಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿದೆ. ಎರಡೂ ಸಿನಿಮಾ ಚೆನ್ನಾಗಿದ್ದರೆ ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳು ಒಳ್ಳೆಯ ಬೆಳೆ ತೆಗೆಯಲಿವೆ. ಈ ಮೊದಲು ಕ್ರಿಸ್‌ಮಸ್ (Christmas) ಸಂದರ್ಭದಲ್ಲಿ ರಿಲೀಸ್ ಆದ ಹಲವು ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗೆದ್ದಿದ್ದವು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಟೈಗರ್ ಜಿಂದಾ ಹೇ: ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಸಲ್ಮಾನ್ ಖಾನ್ ಹೆಚ್ಚು ಒತ್ತು ನೀಡುತ್ತಾರೆ. ಅವರ ನಟನೆಯ ‘ಟೈಗರ್ ಜಿಂದಾ ಹೇ’ ಚಿತ್ರ 2017ರ ಡಿಸೆಂಬರ್ 22ರಂದು ರಿಲೀಸ್ ಆಯಿತು. ಈ ಸಿನಿಮಾ 570 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿತು.
ಪಿಕೆ: ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ಈಗ ‘ಡಂಕಿ’ ಸಿನಿಮಾನ ಕ್ರಿಸ್ಮಸ್ಗೆ ರಿಲೀಸ್ ಮಾಡುತ್ತಿದ್ದಾರೆ. ಈ ಮೊದಲು ಆಮಿರ್ ಖಾನ್ ನಟನೆಯ ‘ಪಿಕೆ’ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಿತ್ತು. 2014ರ ಡಿಸೆಂಬರ್ 9ರಂದು ಈ ಚಿತ್ರ ಬಿಡುಗಡೆ ಆಗಿ ವಿಶ್ವ ಬಾಕ್ಸ್ ಆಫೀಸ್ನಲ್ಲಿ 769 ಕೋಟಿ ರೂಪಾಯಿ ಬಾಚಿಕೊಂಡಿತ್ತು.
ಇದನ್ನೂ ಓದಿ: Merry Christmas: ‘ಮೇರಿ ಕ್ರಿಸ್‌ಮಸ್’ ಒಂದು ಸಿನಿಮಾ ಅಲ್ಲ, ಎರಡು; ಅಚ್ಚರಿ ಮೂಡಿಸಿದ ನಿರ್ದೇಶಕ ಶ್ರೀರಾಮ್ ರಾಘವನ್
ದಿಲ್ವಾಲೇ ಮತ್ತು ಬಾಜಿರಾವ್ ಮಸ್ತಾನಿ: ಶಾರುಖ್ ಖಾನ್ ಹಾಗೂ ಕಾಜೋಲ್ ನಟನೆಯ ‘ದಿಲ್ವಾಲೆ’ ಹಾಗೂ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಾಜಿರಾವ್ ಮಸ್ತಾನಿ’ 2015ರ ಡಿಸೆಂಬರ್ 18ರಂದು ಒಟ್ಟಿಗೆ ರಿಲೀಸ್ ಆಗಿತ್ತು. ‘ಬಾಜಿರಾವ್ ಮಸ್ತಾನಿ’ 355 ಕೋಟಿ ರೂಪಾಯಿ ಗಳಿಸಿದರೆ. ‘ದಿಲ್ವಾಲೆ’ 376 ಕೋಟಿ ರೂಪಾಯಿ ಕಲೆ ಹಾಕಿತ್ತು.
‘ಧೂಮ್ 3’: ‘ಧೂಮ್’ ಸರಣಿಯಲ್ಲಿ ಎರಡು ಚಿತ್ರಗಳು ರಿಲೀಸ್ ಆಗಿ ಗೆದ್ದಿದ್ದವು. ಈ ಸರಣಿಯಲ್ಲಿ ಮೂರನೇ ಸಿನಿಮಾ ಬಂದಿತ್ತು. ಆಮಿರ್ ಖಾನ್ ಅವರು ‘ಧೂಮ್ 3’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. 2013ರ ಡಿಸೆಂಬರ್ 20ರಂದು ಬಿಡುಗಡೆ ಆದ ಈ ಸಿನಿಮಾ ವಿಶ್ವ ಮಟ್ಟದಲ್ಲಿ 558 ಕೋಟಿ ರೂಪಾಯಿ ಗಳಿಸಿತ್ತು.
‘ಸಿಂಬಾ’: ರೋಹಿತ್ ಶೆಟ್ಟಿ ಅವರು ಕಮರ್ಷಿಯಲ್ ಸಿನಿಮಾಗಳನ್ನು ಮಾಡೋಕೆ ಎತ್ತಿದ ಕೈ. ಅವರ ನಿರ್ದೇಶನದ ‘ಸಿಂಬಾ’ ಗಮನ ಸೆಳೆಯಿತು. ಈ ಚಿತ್ರ 2018ರ ಡಿಸೆಂಬರ್ 28ರಂದು ರಿಲೀಸ್ ಆಯಿತು. ವಿಶ್ವ ಮಟ್ಟದಲ್ಲಿ 400 ಕೋಟಿ ರೂಪಾಯಿ ಬಾಚಿದೆ.
ಇದನ್ನೂ ಓದಿ: ಸೆಲೆಬ್ರಿಟಿಗಳ ಕ್ರಿಸ್‌ಮಸ್ ಸಂಭ್ರಮ: ರಶ್ಮಿಕಾ, ಐಶ್ವರ್ಯಾ ರೈ, ಪ್ರೀತಿ ಜಿಂಟಾ ಮನೆಯಲ್ಲಿ ಸಡಗರ
‘ದಬಾಂಗ್ 2’: 2012ರ ಡಿಸೆಂಬರ್ 21ರಂದು ‘ದಬಾಂಗ್ 2’ ರಿಲೀಸ್ ಆಯಿತು. ಈ ಸಿನಿಮಾ 255 ಕೋಟಿ ರೂಪಾಯಿ ಗಳಿಕೆ ಮಾಡಲು ಯಶಸ್ವಿ ಆಗಿದೆ. ಸಲ್ಮಾನ್ ಖಾನ್ ಅವರ ಮ್ಯಾನರಿಸಂ ಸಿನಿಮಾದಲ್ಲಿ ಗಮನ ಸೆಳೆಯಿತು.
‘ದಂಗಲ್’: ಆಮಿರ್ ಖಾನ್ ವೃತ್ತಿ ಜೀವನದಲ್ಲಿ ‘ದಂಗಲ್’ ಚಿತ್ರಕ್ಕೆ ವಿಶೇಷ ಸ್ಥಾನ ಇದೆ. ಈ ಸಿನಿಮಾ 2016ರ ಡಿಸೆಂಬರ್ 23ರಂದು ರಿಲೀಸ್ ಆಗಿ 2,024 ಕೋಟಿ ರೂಪಾಯಿ ಗಳಿಕೆ ಮಾಡಿತು.
ಡಾನ್ 2: ಶಾರುಖ್ ಖಾನ್ ಅವರು ‘ಡಾನ್ 2’ ಮೂಲಕ ಗೆದ್ದು ಬೀಗಿದರು. ಇದು ಕ್ರಿಸ್ಮಸ್ಗೆ ರಿಲೀಸ್ ಆಯಿತು. ಈ ಸಿನಿಮಾ 203 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. 2011ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಚಿತ್ರಕ್ಕೆ ಸಿಕ್ಕಿತ್ತು.
ಗುಡ್ ನ್ಯೂಸ್: ಅಕ್ಷಯ್ ಕುಮಾರ್ ನಟನೆಯ ಗುಡ್ ನ್ಯೂಸ್ ಸಿನಿಮಾ 2019ರ ಡಿಸೆಂಬರ್ 27ರಂದು ರಿಲೀಸ್ ಆಯಿತು. ಈ ಚಿತ್ರ ಬಂಗಾರದ ಬೆಳೆ ತೆಗೆದಿತ್ತು. ಹಾಸ್ಯ ಹಾಗೂ ಭಾವನಾತ್ಮಕ ವಿಚಾರವನ್ನು ಹೇಳಲಾಯಿತು.
ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಿಸುವ ವಿಧಾನಗಳ ಕುರಿತು ಮಾಹಿತಿ ಇಲ್ಲಿವೆ
ಕೆಜಿಎಫ್: ‘ಕೆಜಿಎಫ್’ ಚಿತ್ರ ಹಿಂದಿಯಲ್ಲೂ ಬಿಡುಗಡೆ ಕಂಡಿತ್ತು. ಈ ಸಿನಿಮಾದ ಮೊದಲ ಚಾಪ್ಟರ್ 44 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕನ್ನಡದ ಚಿತ್ರವೊಂದು ಹಿಂದಿಯಲ್ಲಿ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದು ಅದೇ ಮೊದಲು. ಈ ಸಿನಿಮಾ 2018ರ ಡಿಸೆಂಬರ್ 21ರಂದು ರಿಲೀಸ್ ಆಗಿತ್ತು. ಯಶ್ ನಟನೆಗೆ, ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಜನರು ಮಾರುಹೋದರು.
ಪುಷ್ಪ: ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾ 2021ರ ಡಿಸೆಂಬರ್ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಹಿಂದಿ ಭಾಷೆಯಲ್ಲೂ ಬಿಡುಗಡೆ ಕಂಡಿತ್ತು. ಅಲ್ಲಿ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ಮಾಡಿ ಸಾಧನೆ ಮಾಡಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Sun, 1 October 23