2ನೇ ಸೋಮವಾರವೂ ಬಂಪರ್​ ಬೆಳೆ ತೆಗೆದ ‘ಛಾವ’; 11 ದಿನಕ್ಕೆ 353 ಕೋಟಿ ರೂಪಾಯಿ

‘ಛಾವ’ ಸಿನಿಮಾ ತೆರೆಕಂಡು 11 ದಿನಗಳು ಕಳೆದಿವೆ. ಇಂದಿಗೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈತನಕ 353.61 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹೀಗೆಯೇ ಮುಂದುವರಿದರೆ 500 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ವಿಕ್ಕಿ ಕೌಶಲ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

2ನೇ ಸೋಮವಾರವೂ ಬಂಪರ್​ ಬೆಳೆ ತೆಗೆದ ‘ಛಾವ’; 11 ದಿನಕ್ಕೆ 353 ಕೋಟಿ ರೂಪಾಯಿ
Vicky Kaushal

Updated on: Feb 25, 2025 | 4:14 PM

ಸೂಪರ್​ ಹಿಟ್ ‘ಛಾವ’ ಸಿನಿಮಾದ ಅಬ್ಬರ ಸದ್ಯಕ್ಕಂತೂ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಸತತ 11ನೇ ದಿನವೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ ಈ ಸಿನಿಮಾಗೆ ಭರ್ಜರಿ ಜನಸ್ಪಂದನೆ ಸಿಕ್ಕಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಹೆಚ್ಚಾಗುತ್ತಿರುವುದರಿಂದ ಉತ್ತಮವಾಗಿ ಕಲೆಕ್ಷನ್ ಆಗುತ್ತಿದೆ. ಅಚ್ಚರಿ ಎಂದರೆ, 2ನೇ ಸೋಮವಾರ ಕೂಡ ಈ ಸಿನಿಮಾಗೆ ಭರ್ಜರಿ ಕಮಾಯಿ ಆಗಿದೆ. 11 ದಿನಕ್ಕೆ ‘ಛಾವ’ ಸಿನಿಮಾದ ಒಟ್ಟು ಕಲೆಕ್ಷನ್​ 353.61 ಕೋಟಿ ರೂಪಾಯಿ ಆಗಿದೆ.

ಲಕ್ಷ್ಮಣ್ ಉಟೇಕರ್​ ಅವರು ನಿರ್ದೇಶನ ಮಾಡಿದ ‘ಛಾವ’ ಸಿನಿಮಾದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಈ ಪಾತ್ರವನ್ನು ವಿಕ್ಕಿ ಕೌಶಲ್ ಅವರು ಮಾಡಿದ್ದಾರೆ. ಅವರ ನಟನೆಗೆ ಅಭಿಮಾನಿಗಳಿಂದ ಭರ್ಜರಿ ಮೆಚ್ಚಿಗೆ ಸಿಗುತ್ತಿದೆ. ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ನಿರ್ಮಾಪಕರಿಗೆ ಈ ಸಿನಿಮಾದಿಂದ ಸಖತ್ ಲಾಭ ಆಗಿದೆ.

11 ದಿನಗಳ ಕಾಲ ಯಶಸ್ವಿವಾಗಿ ಪ್ರದರ್ಶನ ಕಂಡಿರುವ ‘ಛಾವ’ ಸಿನಿಮಾ 2ನೇ ವೀಕೆಂಡ್​ನಲ್ಲಿ ಅಚ್ಚರಿಯ ಕಮಾಯಿ ಮಾಡಿತು. ಫೆಬ್ರವರಿ 22ರಂದು ಬರೋಬ್ಬರಿ 44.10 ಕೋಟಿ ರೂಪಾಯಿ ಸಂಗ್ರಹ ಆಯಿತು. ಫೆಬ್ರವರಿ 23ರಂದು 41.10 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಸೋಮವಾರ (ಫೆಬ್ರವರಿ 24) 19.10 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ತನ್ನ ನಾಗಾಲೋಟ ಮುಂದುವರಿಸಿದೆ.

ಇದನ್ನೂ ಓದಿ: ‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ

2025ರ ಮೊದಲ ಸೂಪರ್​ ಹಿಟ್​ ಸಿನಿಮಾ ಎಂಬ ಖ್ಯಾತಿಗೆ ‘ಛಾವ’ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಅನಾಯಾಸವಾಗಿ 500 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂದು ಬಾಕ್ಸ್ ಆಫೀಸ್​ ವ್ಯವಹಾರ ಬಲ್ಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾದಿಂದ ವಿಕ್ಕಿ ಕೌಶಲ್ ಅವರ ಸ್ಟಾರ್​ಗಿರಿ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ ಕೂಡ ಮಿಂಚುತ್ತಿದ್ದಾರೆ. ನರೇಂದ್ರ ಮೋದಿ ಸಹ ‘ಛಾವ’ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ ಬಳಿಕ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.