ನಾಯಕಿ ಪ್ರಧಾನ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿದ್ದು ಕಡಿಮೆ. ಅಪರೂಪಕ್ಕೆ ಎಂಬಂತೆ ಬಾಲಿವುಡ್ನ ‘ಕ್ರೂ’ ಸಿನಿಮಾ (Crew Movie) ಮ್ಯಾಜಿಕ್ ಮಾಡಿದೆ. ಮಾರ್ಚ್ 29ರಂದು ಬಿಡುಗಡೆ ಆದ ಈ ಸಿನಿಮಾಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಕರೀನಾ ಕಪೂರ್ ಖಾನ್ (Kareena Kapoor Khan), ಟಬು, ಕೃತಿ ಸನೋನ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮೊದಲ ದಿನ ‘ಕ್ರೂ’ ಸಿನಿಮಾ 10.28 ಕೋಟಿ ರೂಪಾಯಿ ಕಲೆಕ್ಷನ್ (Crew Movie Collection) ಮಾಡಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ ಮೊದಲ ದಿನವೇ 20.07 ಕೋಟಿ ರೂಪಾಯಿ ಆಗಿದೆ. ಮಹಿಳೆಯರೇ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾಗೆ ಮೊದಲ ದಿನ ಈ ಪರಿ ಕಲೆಕ್ಷನ್ ಆಗಿದ್ದು ಇದೇ ಮೊದಲು. ಆ ಮೂಲಕ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ‘ಕ್ರೂ’ ಸಿನಿಮಾ ದಾಖಲೆ ಬರೆದಿದೆ.
ಕಾಮಿಡಿ ಕಥಾಹಂದರವನ್ನು ‘ಕ್ರೂ’ ಸಿನಿಮಾ ಹೊಂದಿದೆ. ಗಗನ ಸಖಿಯರ ಪಾತ್ರದಲ್ಲಿ ಕೃತಿ ಸನೋನ್, ಟಬು ಹಾಗೂ ಕರೀನಾ ಕಪೂರ್ ಅವರು ನಟಿಸಿದ್ದಾರೆ. ಟ್ರೇಲರ್ ನೋಡಿದಾಗಲೇ ಸಿನಿಪ್ರಿಯರಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿತ್ತು. ಮೊದಲ ದಿನ ಮುಗಿಬಿದ್ದು ಜನರು ಈ ಸಿನಿಮಾ ನೋಡಿದ್ದಾರೆ. ಅದರ ಪರಿಣಾಮವಾಗಿ ಉತ್ತಮ ಓಪನಿಂಗ್ ಸಿಕ್ಕಿದೆ. ಎರಡನೇ ದಿನ ಕೂಡ ಈ ಸಿನಿಮಾದ ಗಳಿಕೆಯಲ್ಲಿ ಏರಿಕೆ ಆಗಿದೆ.
ಇದನ್ನೂ ಓದಿ: ಯಶ್ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್? ‘ಟಾಕ್ಸಿಕ್’ ಚಿತ್ರದ ಬಗ್ಗೆ ಬಿಗ್ ನ್ಯೂಸ್
ಎರಡನೇ ದಿನವಾದ ಶನಿವಾರ (ಮಾರ್ಚ್ 30) ‘ಕ್ರೂ’ ಸಿನಿಮಾದ ಬಿಸ್ನೆಸ್ ಏರಿಕೆ ಕಂಡಿದೆ. 2ನೇ ದಿನ ಈ ಸಿನಿಮಾಗೆ 10.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಸಿನಿಮಾ ತಂಡದ ಖುಷಿಗೆ ಕಾರಣ ಆಗಿದೆ. ಭಾನುವಾರ (ಮಾರ್ಚ್ 31) ಕೂಡ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿನ ಕಾಮಿಡಿಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟು ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಮೂಡಿದೆ.
ಇದನ್ನೂ ಓದಿ: ‘ಮತ್ತೆ ನಾನು ಅಷ್ಟು ತೆಳ್ಳಗಾಗಲ್ಲ’: ನಿರ್ಧಾರದ ಜೊತೆ ಕಾರಣ ತಿಳಿಸಿದ ಕರೀನಾ
ಚೆನ್ನೈ, ಬೆಂಗಳೂರು, ಮುಂಬೈ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ‘ಕ್ರೂ’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್ನಲ್ಲಿ ಜನರು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಎರಡು ದಿನದಲ್ಲಿ 21.15 ಕೋಟಿ ರೂಪಾಯಿ ಬಾಚಿಕೊಂಡಿದೆ.
ಭಾನುವಾರ ‘ಕ್ರೂ’ ಸಿನಿಮಾದ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಆಗಲಿದೆ ಎಂದು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ನಟಿ ಆಲಿಯಾ ಭಟ್ ಅವರು ಈ ಸಿನಿಮಾದ ಯಶಸ್ಸಿಗೆ ಭೇಷ್ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.