2ನೇ ಮಗಳಿಗೆ ದೇವಿ ಎಂದು ನಾಮಕರಣ ಮಾಡಿದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್
ದಸರಾ ಹಬ್ಬದ ದಿನವೇ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಎರಡನೇ ಮಗುವಿಗೆ ದೇವಿ ಪಡುಕೋಣೆ ಸಿಂಗ್ ಎಂದು ಅವರು ನಾಮಕರಣ ಮಾಡಿದ್ದಾರೆ. ಈ ಸುದ್ದಿಯ ಜೊತೆಗೆ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಬಾಲಿವುಡ್‌ನ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಎರಡನೇ ಮಗುವಿಗೆ ಸುಂದರವಾದ ಹೆಸರೊಂದನ್ನು ಇಟ್ಟಿದ್ದಾರೆ. ಸೆಪ್ಟೆಂಬರ್ 19ರಂದು ರಾಧಾಷ್ಟಮಿಯ ಶುಭ ದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ, ಇದೀಗ ವಿಜಯದಶಮಿ (ದಸರಾ) ಹಬ್ಬದ ವಿಶೇಷ ಸಂದರ್ಭದಲ್ಲಿ ಮಗುವಿನ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸ್ಟಾರ್ ದಂಪತಿಯು ತಮ್ಮ ಎರಡನೇ ಮಗುವಿಗೆ ದೇವಿ ಪಡುಕೋಣೆ ಸಿಂಗ್ ಎಂದು ನಾಮಕರಣ ಮಾಡಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಐವರಿ ಮತ್ತು ಗೋಲ್ಡನ್ ಬಣ್ಣದ ಬಟ್ಟೆಗಳಲ್ಲಿ ಕಂಗೊಳಿಸುತ್ತಿರುವ ಸುಂದರವಾದ ಫ್ಯಾಮಿಲಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೀಪಿಕಾ ಹಾಗೂ ರಣವೀರ್, ‘ಪ್ರೀತಿ ಮತ್ತು ಸಮೃದ್ಧಿಯ ಸಂಕೇತ… ದೇವಿ ಪಡುಕೋಣೆ ಸಿಂಗ್’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
ಈ ಹಿಂದೆ ತಮ್ಮ ಮೊದಲ ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದ ಈ ಜೋಡಿ, ಈಗ ಎರಡನೇ ಮಗುವಿಗೆ ದೇವಿ ಎಂದು ನಾಮಕರಣ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ದೀಪಿಕಾ-ರಣವೀರ್ ಅವರ ಈ ಪೋಸ್ಟ್‌ಗೆ ಭೂಮಿ ಪೆಡ್ನೇಕರ್, ಶಾರ್ವರಿ, ಸಂಜಯ್ ಕಪೂರ್, ಹುಮಾ ಖುರೇಷಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿಗಳನ್ನು ಕಳುಹಿಸಿ ಶುಭ ಹಾರೈಸಿದ್ದಾರೆ.
View this post on Instagram
ಅಂದಹಾಗೆ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 14 ಮತ್ತು 15ರಂದು ಇಟಲಿಯ ಲೇಕ್ ಕೊಮೋದಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಮಗಳು ದುವಾ ಜನಿಸಿದ್ದರೆ, 2026ರ ಸೆಪ್ಟೆಂಬರ್ 19ರಂದು ಎರಡನೇ ಮಗು ಜನಿಸಿತು.
ಇದನ್ನೂ ಓದಿ: ಮಗಳು ದುವಾ ಹುಟ್ಟುಹಬ್ಬದಂದೇ ವಿಶೇಷ ಫೋಟೋ ಹಂಚಿಕೊಂಡ ದೀಪಿಕಾ, ರಣವೀರ್ ಸಿಂಗ್
ಸಿನಿಮಾದ ವಿಚಾರಕ್ಕೆ ಬಂದರೆ, ಎರಡನೇ ಮಗುವಿನ ಜನನದ ಕಾರಣದಿಂದ ಸ್ವಲ್ಪ ದಿನಗಳ ಕಾಲ ಚಿತ್ರೀಕರಣದಿಂದ ವಿರಾಮ ಪಡೆದಿದ್ದ ನಟ ರಣವೀರ್ ಸಿಂಗ್, ಅಕ್ಟೋಬರ್ 27ರಿಂದ ಮುಂಬೈನಲ್ಲಿ ನಡೆಯಲಿರುವ ‘ಪ್ರಳಯ್’ ಸಿನಿಮಾದ ಶೂಟಿಂಗ್‌ಗೆ ಮರಳಲಿದ್ದಾರೆ. ವರದಿಗಳ ಪ್ರಕಾರ, ಅವರು ಕೆಲವೇ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡು ಮತ್ತೆ ವಿರಾಮ ಪಡೆಯಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




