ಇತ್ತೀಚೆಗೆ ಹಲವು ಬಾಲಿವುಡ್ ತಾರೆಯರಿಗೆ ಸೋಂಕು ಕಾಣಿಸಿಕೊಂಡಿತ್ತು. ಕೆಲವರು ಆಸ್ಪತ್ರೆಗೂ ದಾಖಲಾಗಿದ್ದು, ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಆದರೆ ಅದೃಷ್ಟವಶಾತ್ ಈ ಬಾರಿ ಸೋಂಕಿನ ಪ್ರಭಾವ ಎರಡನೇ ಅಲೆಯಷ್ಟು ತೀವ್ರವಾಗಿಲ್ಲ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ತುತ್ತಾಗಿದ್ದರು. ದೀಪಿಕಾ ತಂದೆ ಪ್ರಕಾಶ್ (Prakash), ತಾಯಿ ಉಜ್ಜಲಾ ಹಾಗೂ ಸೋದರಿ ಅನಿಶಾ ಕೂಡ ಸೋಂಕಿಗೆ ತುತ್ತಾಗಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಆ ಸಂದರ್ಭದಲ್ಲಿ ಪರಿಸ್ಥಿತಿ ಎಷ್ಟು ಭೀಕರವಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಸಂದರ್ಭದಲ್ಲಿ ದೈಹಿಕವಾಗಿ ತನ್ನ ಗುರುತೇ ಸಿಗುತ್ತಿರಲಿಲ್ಲ. ತಲೆಯೂ ಓಡುತ್ತಿರಲಿಲ್ಲ. ಜೀವನದ ಅತ್ಯಂತ ಕಷ್ಟದ ದಿನಗಳು ಅವಾಗಿದ್ದವು ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿ ದಾಟಿ ಮತ್ತೆ ಮೊದಲಿನಂತಾಗಲು ದೀಪಿಕಾಗೆ ಬರೋಬ್ಬರಿ ಎರಡು ತಿಂಗಳ ವಿಶ್ರಾಂತಿ ಬೇಕಾಯಿತಂತೆ.
ಇತ್ತೀಚೆಗೆ ಫಿಲ್ಮ್ ಕಂಪಾನಿಯನ್ ಜತೆ ಮಾತನಾಡಿದ ದೀಪಿಕಾ, ಕೊವಿಡ್ ತಮ್ಮನ್ನು ಹೇಗೆ ಬಾಧಿಸಿತ್ತು ಎಂಬುದನ್ನು ವಿವರಿಸಿದ್ದಾರೆ. ‘‘ಕೊವಿಡ್ ನಂತರ ದೈಹಿಕವಾಗಿ ನಾನು ಸಂಪೂರ್ಣ ಬದಲಾಗಿದ್ದೆ. ಔಷಧಿಗಳನ್ನು ತೆಗದುಕೊಂಡ ಪರಿಣಾಮ ನನ್ನನ್ನು ಗುರುತಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕೊರೊನಾವೇ ವಿಚಿತ್ರ, ಅದಕ್ಕೆ ತುತ್ತಾದರೆ ನಮ್ಮ ದೇಹ ಹಾಗೂ ಮನಸ್ಸು ಕೂಡ ಬಹಳ ಬದಲಾಗುತ್ತದೆ’’ ಎಂದಿದ್ದಾರೆ.
ಸಂದರ್ಶನದಲ್ಲಿ ದೀಪಿಕಾ ಮತ್ತೊಂದು ವಿಚಾರ ಹಂಚಿಕೊಂಡಿದ್ದಾರೆ. ಕೊರೊನಾ ಸಂದರ್ಭದ ಅನಾರೋಗ್ಯಕ್ಕಿಂತ ಕೊರೊನಾ ನಂತರದ ಸಮಸ್ಯೆಗಳು ತಮ್ಮನ್ನು ತಲ್ಲಣಗೊಳಿಸಿತು ಎಂದಿದ್ದಾರೆ. ‘‘ನನಗೆ ಸೋಂಕು ಕಾಣಿಸಿಕೊಂಡಾಗ ಅಷ್ಟೇನೂ ಸಮಸ್ಯೆಯಾಗಲಿಲ್ಲ. ಆದರೆ ನಂತರದಲ್ಲಿ ಸುಮಾರು ಎರಡು ತಿಂಗಳ ಕಾಲ ನನ್ನ ಮನಸ್ಸು, ಯೋಚನೆ ಯಾವುದೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಆ ದಿನಗಳು ಜೀವನದ ಬಹಳ ಕಷ್ಟದ ದಿನಗಳಾಗಿದ್ದವು’’ ಎಂದು ಹೇಳಿಕೊಂಡಿದ್ದಾರೆ.
ಪ್ರಸ್ತುತ ಬಾಲಿವುಡ್ ತಾರೆಯರು ಹಾಗೂ ವಿವಿಧ ರಂಗದ ಪ್ರಮುಖರಿಗೆ ಸೋಂಕು ತಗುಲುತ್ತಿರುವುದರ ಹಿನ್ನೆಲೆಯಲ್ಲಿ ದೀಪಿಕಾ ಮಾತು ಮಹತ್ವ ಪಡೆದಿದೆ. ಚಿತ್ರಗಳ ವಿಷಯಕ್ಕೆ ಬಂದರೆ ದೀಪಿಕಾ ‘ಗೆಹ್ರಾಯಿಯಾನ್’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಶಕುನ್ ಬಾತ್ರಾ ನಿರ್ದೇಶನದ ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 11ರಂದು ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ಡಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಚಿರು-ರಾಯನ್ ಬಗ್ಗೆ ಮೇಘನಾ ರಾಜ್ ಸರ್ಜಾ ಹೃದಯಸ್ಪರ್ಶಿ ಮಾತು