
ನಟ ಶಾರುಖ್ ಖಾನ್ (Shah Rukh Khan) ಏನೇ ಮಾಡಿದರೂ ಅದನ್ನು ವಿರೋಧಿಸಲು ಒಂದು ವರ್ಗದ ಜನರು ಕಾದಿರುತ್ತಾರೆ. ಎಲ್ಲ ಕಾರ್ಯದಲ್ಲಿಯೂ ಕೊಂಕು ತೆಗೆಯುವ ಮಂದಿ ಇದ್ದಾರೆ. ಈಗ ಶಾರುಖ್ ಖಾನ್ ಅವರ ಹೊಸ ಸಿನಿಮಾ ‘ಪಠಾಣ್’ (Pathaan Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರದ ‘ಬೇಷರಂ ರಂಗ್..’ ಹಾಡು ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಾಣುವ ಮೂಲಕ ಈ ಗೀತೆ ಸೂಪರ್ ಹಿಟ್ ಆಗಿದೆ. ಆದರೆ ಕೆಲವರು ‘ಬೇಷರಂ ರಂಗ್..’ ಹಾಡಿನ ಬಗ್ಗೆ ತಕರಾರು ತೆಗೆದಿದ್ದಾರೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿಯ ಬಣ್ಣದ ಬಗ್ಗೆಯೂ ತಕರಾರು ತೆಗೆಯಲಾಗಿದೆ.
ಶಾರುಖ್ ಖಾನ್ ನಟನೆಯ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂದು ಒಂದಷ್ಟು ಜನರು ಪಣತೊಟ್ಟಿದ್ದಾರೆ. ಆ ಕಾರಣಕ್ಕೆ ಎಲ್ಲದರಲ್ಲೂ ಕೊಂಕು ತೆಗೆಯಲಾಗುತ್ತಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ‘ಪಠಾಣ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: Besharam Rang: ಹೊಸ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
‘ಬೇಷರಂ ರಂಗ್..’ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ತುಂಬ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಅವರು ಇಷ್ಟೊಂದು ಎಕ್ಸ್ಪೋಸ್ ಮಾಡುವ ಅವಶ್ಯಕತೆ ಏನಿತ್ತು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೊಂದು ‘ಅಶ್ಲೀಲ ಸಾಂಗ್’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಸರಿಯಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಕಂಡ ‘ಪಠಾಣ್’ ಸಿನಿಮಾ ಹಾಡು
ಶಾರುಖ್ ಖಾನ್ ಅವರು ಈ ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಝಲಕ್ ಕೂಡ ಈ ಹಾಡಿನಲ್ಲಿ ಹೈಲೈಟ್ ಆಗಿದೆ. ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅವರ ಅಪ್ಪಟ ಅಭಿಮಾನಿಗಳಿಗೆ ಈ ಹಾಡು ತುಂಬ ಇಷ್ಟ ಆಗಿದೆ.
2023ರ ಜನವರಿ 25ರಂದು ‘ಪಠಾಣ್’ ಚಿತ್ರ ರಿಲೀಸ್ ಆಗಲಿದೆ. ಸಿದ್ದಾರ್ಥ್ ಆನಂದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಟೀಸರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 am, Wed, 14 December 22