ನಟ ಶಾರುಖ್ ಖಾನ್ (Shah Rukh Khan) ಅವರು ‘ಜವಾನ್’ ಮತ್ತು ‘ಡಂಕಿ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಪಠಾಣ್’ ಸಕ್ಸಸ್ ಬಳಿಕ ಅವರು ಸುಮ್ಮನೆ ಕುಳಿತಿಲ್ಲ. ಮುಂದಿನ ಸಿನಿಮಾಗಳ ಮೇಲೆ ಗಮನ ಹರಿಸಿದ್ದಾರೆ. ಅಟ್ಲಿ ಕುಮಾರ್ ನಿರ್ದೇಶನದಲ್ಲಿ ಶಾರುಖ್ ಖಾನ್ ನಟಿಸುತ್ತಿರುವ ‘ಜವಾನ್’ ಸಿನಿಮಾದ (Jawan Movie) ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ ಈ ಸಿನಿಮಾದ ಕೆಲವು ದೃಶ್ಯಗಳನ್ನು ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಸಖತ್ ಬೇಸರ ಆಗಿದೆ. ಸ್ವತಃ ಶಾರುಖ್ ಖಾನ್ ಅವರ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾದ ದೃಶ್ಯಗಳು ಇಂಟರ್ನೆಟ್ನಲ್ಲಿ ಸೋರಿಕೆಯಾದರೆ ನಿರ್ಮಾಪಕರಿಗೆ ನಷ್ಟ ಆಗುತ್ತದೆ. ಹಾಗಾಗಿ ಶಾರುಖ್ ಖಾನ್ ಅವರು ದೆಹಲಿ ಹೈಕೋರ್ಟ್ (Delhi High Court) ಮೆಟ್ಟಿಲೇರಿದ್ದಾರೆ. ಅಲ್ಲಿ ಅವರಿಗೆ ಜಯ ಸಿಕ್ಕಿದೆ.
ಕೆಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ‘ಜವಾನ್’ ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಲಾಗಿದೆ. ಇದರಿಂದ ಶಾರುಖ್ ಖಾನ್ ಗರಂ ಆಗಿದ್ದಾರೆ. ತಮ್ಮ ಸಿನಿಮಾದ ಕಾಂಟೆಂಟ್ ಸೋರಿಕೆ ಮಾಡಿದ ಕಿಡಿಗೇಡಿಗಳ ವಿರುದ್ಧ ಅವರು ಕಾನೂನಿನ ಸಮರ ಸಾರಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ, ಯೂಟ್ಯೂಬ್, ವೆಬ್ಸೈಟ್ ಮುಂತಾದ ಕಡೆಗಳಲ್ಲಿ ಈ ದೃಶ್ಯಗಳನ್ನು ಅಪ್ಲೋಡ್ ಮಾಡಿರುವವರು ಕೂಡಲೇ ಡಿಲೀಟ್ ಮಾಡಬೇಕು ಅಂತ ದೆಹಲಿ ಹೈಕೋರ್ಟ್ ಆದೇಶ ನೀಡಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.
ಇದನ್ನೂ ಓದಿ: Jawan: ಶಾರುಖ್ ಖಾನ್ ವಿಷಯದಲ್ಲಿ ಮನಸ್ಸು ಬದಲಾಯಿಸಿದ ಅಲ್ಲು ಅರ್ಜುನ್? ‘ಜವಾನ್’ ಬಗ್ಗೆ ಹಬ್ಬಿದೆ ಗಾಸಿಪ್
ಸಿನಿಮಾದ ಪ್ರತಿ ಕಾಂಟೆಂಟ್ ಕೂಡ ಪ್ರಚಾರಕ್ಕೆ ಸಹಕಾರಿ ಆಗುತ್ತದೆ. ಸೂಕ್ತ ಸಂದರ್ಭದಲ್ಲಿ ಕಲಾವಿದರ ಫಸ್ಟ್ ಲುಕ್, ಥೀಮ್ ಮ್ಯೂಸಿಕ್, ಡ್ಯಾನ್ಸ್ ತುಣುಕು ಮುಂತಾದ ಕಾಂಟೆಂಟ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಮಾಡಬೇಕು ಎಂದು ಚಿತ್ರತಂಡದವರು ಪ್ಲ್ಯಾನ್ ರೂಪಿಸಿರುತ್ತಾರೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತದೆ. ಹೀಗಿರುವಾಗ ಕಿಡಿಗೇಡಿಗಳು ದೃಶ್ಯ ಲೀಕ್ ಮಾಡಿದರೆ ಚಿತ್ರತಂಡಕ್ಕೆ ನಷ್ಟ ಆಗುತ್ತದೆ. ಹಾಗಾಗಿ ‘ಜವಾನ್’ ತಂಡದವರು ಕೋರ್ಟ್ ಮೆಟ್ಟಿಲು ಏರಿದ್ದರು.
ಇದನ್ನೂ ಓದಿ: Jawan: ಶಾರುಖ್ ಖಾನ್-ಸಂಜಯ್ ದತ್ ಮುಖಾಮುಖಿ; ‘ಜವಾನ್’ ಚಿತ್ರದಲ್ಲಿ ಭರ್ಜರಿ ಫೈಟ್
‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಮುಂತಾದವರು ನಟಿಸಿದ್ದಾರೆ. ಜೂನ್ 2ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಟ್ಲಿ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ಹೆಚ್ಚು ಹೈಪ್ ಸೃಷ್ಟಿ ಆಗಿದೆ. ‘ಪಠಾಣ್’ ಚಿತ್ರದಿಂದ ಭರ್ಜರಿಯಾಗಿ ಗೆದ್ದಿರುವ ಶಾರುಖ್ ಖಾನ್ ಅವರು ಮತ್ತೊಂದು ಗೆಲುವಿಗಾಗಿ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:32 am, Wed, 26 April 23