
ನವದೆಹಲಿ: ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ‘ಸೂರ್ಯ: ಅಂತ್ ಸೆ ಆರಂಭ್ ತಕ್’ ಹಿಂದಿ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಬುಧವಾರ (ಅಕ್ಟೋಬರ್ 4) ನಿರಾಕರಿಸಿದೆ. ಈ ಚಿತ್ರವು ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ತಾತ್ಕಾಲಿಕ ಮುಖ್ಯ ನ್ಯಾಯಮೂರ್ತಿ ನಿತಿನ್ ವಾಸುದೇವ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆಗೆ ನಿರಾಕರಿಸಿದೆ. ವೈದ್ಯರ ಸಂಘಟನೆಯೊಂದು ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಮುಂದೆ ಮತ್ತೊಂದು ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ. ಹೀಗಾಗಿ ಒಂದೇ ವಿಷಯಕ್ಕೆ ಹಲವು ಅರ್ಜಿಗಳ ಅಗತ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಡಾ. ನಚಿಕೇತ್ ಭಾಟಿಯಾ ಮತ್ತು ಡಾ. ಧ್ರುವ್ ಚೌಹಾಣ್ ಎಂಬ ವೈದ್ಯರು ಈ ಪಿಐಎಲ್ ಸಲ್ಲಿಸಿದ್ದರು. ಸಿನಿಮಾದ ಅಧಿಕೃತ ಟ್ರೇಲರ್‌ನಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಭ್ರಷ್ಟರೆಂದು ಬಿಂಬಿಸಲಾಗಿದೆ ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲಿನ ಭೌತಿಕ ದೌರ್ಜನ್ಯ ಮತ್ತು ಹಿಂಸೆಯನ್ನು ನಾಯಕತ್ವದ ಸಂಕೇತದಂತೆ ವೈಭವೀಕರಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಮಾಡಲು ಸಿನಿಮಾದ ಟೀಸರ್‌ನಲ್ಲಿ ಬಳಸಿರುವ ಭಾಷೆಯು ಪ್ರಚೋದನೆ ನೀಡುವಂತಿದೆ. ಇದು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಆದ್ದರಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಯು ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ತೆಗೆದುಹಾಕಬೇಕು ಅಥವಾ ಮಾರ್ಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇದನ್ನೂ ಓದಿ: ಸನ್ನಿ ಡಿಯೋಲ್ ‘ಸೂರ್ಯ’ ಚಿತ್ರದಲ್ಲಿ ವೈದ್ಯರ ನಿಂದನೆ; ವೈದ್ಯಕೀಯ ಸಂಘ ಅಸಮಾಧಾನ
ಇದೇ ವಿಚಾರವಾಗಿ ನವೆಂಬರ್ 2ರಂದು ಏಕಸದಸ್ಯ ಪೀಠವು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 16ರಂದು ವಿಚಾರಣೆ ನಿಗದಿಪಡಿಸಿದೆ. ಹೀಗಾಗಿ ‘ಪ್ರಸ್ತುತ ಅರ್ಜಿದಾರರೂ ವೈದ್ಯರಾಗಿದ್ದರೂ, ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗಳನ್ನು ವಿಭಜಿಸುವ ಅಗತ್ಯ ನಮಗ ಕಾಣಿಸುತ್ತಿಲ್ಲ. ಅರ್ಜಿದಾರರು ಬೇಕಿದ್ದಲ್ಲಿ ಏಕಸದಸ್ಯ ಪೀಠದ ಮುಂದಿರುವ ವಿಚಾರಣೆಯಲ್ಲಿ ಭಾಗವಹಿಸಬಹುದು ಅಥವಾ ಅಧಿಕಾರಿಗಳಿಗೆ ತಮ್ಮ ಮನವಿಯನ್ನು ಸಲ್ಲಿಸಬಹುದು’ ಎಂದು ವಿಭಾಗೀಯ ಪೀಠ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.