
ಹಿರಿಯ ನಟ ಧರ್ಮೇಂದ್ರ (Dharmendra) ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಉಸಿರಾಟಕ್ಕೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ಅವರ ಸ್ಥಿತಿ ಗಂಭೀರ ಆಗಿದ್ದರಿಂದ ಅಭಿಮಾನಿಗಳು ಮತ್ತು ಕುಟುಂಬದವರಿಗೆ ಆತಂಕ ಆಗಿತ್ತು. ಆದರೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಈಗ ಧರ್ಮೇಂದ್ರ ಅವರ ಆರೋಗ್ಯ ಸುಧಾರಿಸುತ್ತಿದೆ. ಈ ಸುದ್ದಿ ಕೇಳಿ ಎಲ್ಲರಿಗೂ ಖುಷಿ ಆಗಿದೆ. ಶೀಘ್ರದಲ್ಲೇ ಧರ್ಮೇಂದ್ರ ಅವರ ಹುಟ್ಟುಹಬ್ಬ ಬರುತ್ತಿದೆ. ಈ ಬಾರಿ ಸಡಗರದಿಂದ ಹುಟ್ಟುಹಬ್ಬ (Dharmendra Birthday) ಆಚರಣೆ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.
ಡಿಸೆಂಬರ್ 8ರಂದು ಧರ್ಮೇಂದ್ರ ಅವರ ಹುಟ್ಟುಹಬ್ಬ. ಈ ಬಾರಿ ಅವರು 90ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಇದು ಸ್ಪೆಷಲ್. ಅಲ್ಲದೇ ತೀವ್ರ ಅನಾರೋಗ್ಯದಿಂದ ಅವರು ಚೇತರಿಸಿಕೊಂಡಿರುವ ಕಾರಣದಿಂದ ಬಹಳ ಸಂಭ್ರಮದಿಂದ ಕುಟುಂಬದವರು ಹುಟ್ಟುಹಬ್ಬ ಆಚರಣೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.
ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಅವರ ಹುಟ್ಟುಹಬ್ಬವನ್ನು ನವೆಂಬರ್ 2ರಂದು ಆಚರಣೆ ಮಾಡಬೇಕಿತ್ತು. ಆದರೆ ತಂದೆಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರು ಸೆಲೆಬ್ರೇಟ್ ಮಾಡಿರಲಿಲ್ಲ. ತಂದೆ ಚೇತರಿಸಿಕೊಂಡ ನಂತರ ಹುಟ್ಟುಹಬ್ಬ ಆಚರಿಸಲು ಅವರು ನಿರ್ಧರಿಸಿದ್ದರು. ಹಾಗಾಗಿ ಡಿಸೆಂಬರ್ 8ರಂದು ತಂದೆ-ಮಗಳ ಹುಟ್ಟುಹಬ್ಬವನ್ನು ಒಟ್ಟಿಗೆ ಸೆಲೆಬ್ರೇಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಹರಡಿದೆ.
ಅಕ್ಟೋಬರ್ 31ರಂದು ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ನಂತರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ನೀಡುತ್ತಿರುವಾಗಲೇ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿತ್ತು. ಕೂಡಲೇ ಕುಟುಂಬದವರು ಸ್ಪಷ್ಟನೆ ನೀಡಿದರು. ಧರ್ಮೇಂದ್ರ ಅವರು ಗುಣಮುಖರಾಗುತ್ತಿದ್ದಾರೆ ಎಂಬುದನ್ನು ತಿಳಿಸಲಾಯಿತು.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಧರ್ಮೇಂದ್ರ; ಮನೆಯಲ್ಲಿ ಮುಂದುವರಿಯಲಿದೆ ಚಿಕಿತ್ಸೆ
ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಮಲಗಿದ್ದ ವಿಡಿಯೋವನ್ನು ರಹಸ್ಯವಾಗಿ ಚಿತ್ರಿಸಿ ವೈರಲ್ ಮಾಡಲಾಗಿತ್ತು. ಆ ವಿಡಿಯೋದಲ್ಲಿ ಇಡೀ ಕುಟುಂಬದವರು ಆತಂಕದಲ್ಲಿ ಇರುವುದು ಕಾಣಿಸಿತ್ತು. ಆ ವಿಡಿಯೋ ವೈರಲ್ ಆದ ಬಳಿಕ ಧರ್ಮೇಂದ್ರ ಅವರ ಕುರಿತು ವದಂತಿ ಹಬ್ಬಿತು. ರಹಸ್ಯವಾಗಿ ವಿಡಿಯೋ ಚಿತ್ರಿಸಿ ವೈರಲ್ ಮಾಡಿದ ಆಸ್ಪತ್ರೆಯ ಸಿಬ್ಬಂದಿಯನ್ನು ಬಳಿಕ ಪೊಲೀಸರು ಬಂಧಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.