ನಟ ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ವಿಡಿಯೋ ಚಿತ್ರಿಸಿದ ಸಿಬ್ಬಂದಿ ಬಂಧನ
ಖ್ಯಾತ ನಟ ಧರ್ಮೇಂದ್ರ ಅವರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ವೈರಲ್ ವಿಡಿಯೋದಿಂದ ಧರ್ಮೇಂದ್ರ ಹಾಗೂ ಅವರ ಕುಟುಂಬದವರ ಖಾಸಗಿತನಕ್ಕೆ ಧಕ್ಕೆ ಆಗಿದೆ. ರಹಸ್ಯವಾಗಿ ವಿಡಿಯೋ ಮಾಡಿದ ಆಸ್ಪತ್ರೆಯ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ (Dharmendra) ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಕುಟುಂಬದವರಿಗೆ, ಆಪ್ತರಿಗೆ, ಅಭಿಮಾನಿಗಳಿಗೆ ಆತಂಕ ಆಗಿತ್ತು. ಇದೇ ವೇಳೆ ಧರ್ಮೇಂದ್ರ ಅವರ ಒಂದು ವಿಡಿಯೋ ವೈರಲ್ ಆಯಿತು. ಆ ವಿಡಿಯೋ ಚಿತ್ರಿಸಿದ್ದ ಆಸ್ಪತ್ರೆ ಸಿಬ್ಬಂದಿಯನ್ನು ಈಗ ಬಂಧಿಸಲಾಗಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಧರ್ಮೇಂದ್ರ ಅವರ ವಿಡಿಯೋವನ್ನು (Dharmendra Video) ರಹಸ್ಯವಾಗಿ ಚಿತ್ರಿಸಿ ವೈರಲ್ ಮಾಡಿದ್ದಕ್ಕಾಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅನೇಕ ವದಂತಿಗಳು ಹಬ್ಬಲು ಶುರುವಾಯಿತು. ಇದರಿಂದ ಕುಟುಂಬದವರಿಗೆ ಚಿಂತೆ ಉಂಟಾಗಿತ್ತು. ಅದೇ ಸಂದರ್ಭದಲ್ಲಿ ಬೆಡ್ ಮೇಲೆ ಪ್ರಜ್ಞೆ ಇಲ್ಲದೇ ಮಲಗಿದ್ದ ಧರ್ಮೇಂದ್ರ ಅವರ ವಿಡಿಯೋ ವೈರಲ್ ಆದಾಗ ಇನ್ನಷ್ಟು ಆತಂಕ ಹೆಚ್ಚಿತು. ಇದಕ್ಕೆಲ್ಲ ಕಾರಣ ಆದ ಆಸ್ಪತ್ರೆ ಸಿಬ್ಬಂದಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋದಲ್ಲಿ ಏನಿತ್ತು?
ಆಸ್ಪತ್ರೆಯ ಬೆಡ್ ಮೇಲೆ ಧರ್ಮೇಂದ್ರ ಮಲಗಿದ್ದರು. ಅವರ ಸುತ್ತಮುತ್ತ ಕುಟುಂಬದ ಸದಸ್ಯರು ನಿಂತಿದ್ದರು. ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಪಕ್ಕದಲ್ಲೇ ಕುಳಿತಿದ್ದರು. ಮಕ್ಕಳಾದ ಬಾಬಿ ಡಿಯೋಲ್, ಸನ್ನಿ ಡಿಯೋಲ್, ಮೊಮ್ಮಕ್ಕಳಾದ ಕರಣ್, ರಾಜ್ವೀರ್ ಮುಂತಾದವರು ಭಾವುಕರಾಗಿದ್ದರು. ಈ ಸಂದರ್ಭದ ವಿಡಿಯೋವನ್ನು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರಹಸ್ಯವಾಗಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿತು. ಆ ಬಗ್ಗೆ ಕುಟುಂಬದವರು ಕೂಡಲೇ ಸ್ಪಷ್ಟನೆ ನೀಡಿದರು. 2ನೇ ಪತ್ನಿ ಹೇಮಾ ಮಾಲಿನಿ ಮತ್ತು ಮಗಳು ಇಶಾ ಡಿಯೋಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದರು. ‘ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ನಮ್ಮ ತಂದೆ ಗುಣಮುಖರಾಗುತ್ತಿದ್ದಾರೆ. ನಮ್ಮ ಕುಟುಂಬದ ಖಾಸಗಿತನ ಕಾಪಾಡಿ’ ಎಂದು ಇಶಾ ಡಿಯೋಲ್ ಅವರು ಪೋಸ್ಟ್ ಮಾಡಿದರು.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಧರ್ಮೇಂದ್ರ; ಮನೆಯಲ್ಲಿ ಮುಂದುವರಿಯಲಿದೆ ಚಿಕಿತ್ಸೆ
ಬುಧವಾರ (ನವೆಂಬರ್ 12) ಬೆಳಗ್ಗೆ ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮನೆಯಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ. ಯಾವುದೇ ವದಂತಿ ಹಬ್ಬಿಸಬೇಡಿ ಎಂದು ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ. ಧರ್ಮೇಂದ್ರ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




