ಜಾತಿ ಮತ್ತು ಪ್ರೀತಿ: ಸಿನಿಮಾ ಸರಣಿ ನಿರ್ಮಿಸಲು ಮುಂದಾದ ಕರಣ್ ಜೋಹರ್

Dhadak 2 movie: ನಿರ್ಮಾಪಕ ಕರಣ್ ಜೋಹರ್ ‘ಜಾತಿ ಮತ್ತು ಪ್ರೀತಿ’ ಕತೆಯುಳ್ಳ ಸಿನಿಮಾಗಳದ್ದೇ ಒಂದು ಸರಣಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಕರಣ್ ಜೋಹರ್ ಸಹ ನಿರ್ಮಾಣ ಮಾಡಿರುವ ‘ದಡಕ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ನೋಡಿದವರು ಕರಣ್ ಜೋಹರ್ ಯೋಜನೆಯನ್ನು ಕೊಂಡಾಡುತ್ತಿದ್ದಾರೆ.

ಜಾತಿ ಮತ್ತು ಪ್ರೀತಿ: ಸಿನಿಮಾ ಸರಣಿ ನಿರ್ಮಿಸಲು ಮುಂದಾದ ಕರಣ್ ಜೋಹರ್
Karan Johar

Updated on: Jul 13, 2025 | 4:44 PM

ಜಾತಿ ಮತ್ತು ಪ್ರೀತಿಯ ಸುತ್ತ ದಶಕಗಳಿಂದಲೂ ಸಿನಿಮಾಗಳು ಬರುತ್ತಲೇ ಇವೆ. ಆದರೆ ಈಗಲೂ ಸಹ ಜಾತಿ ಕಾರಣಕ್ಕೆ ಪ್ರೇಮಿಗಳ ಕೊಲೆಗಳು ನಿಂತಿಲ್ಲ. ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್, ‘ಜಾತಿ ಮತ್ತು ಪ್ರೀತಿ’ಯ ವಿಷಯವನ್ನೇ ಇಟ್ಟುಕೊಂಡು ಒಂದು ಸಿನಿಮಾ ಸರಣಿ ನಿರ್ಮಿಸಲು ಮುಂದಾಗಿದ್ದಾರೆ. ಉಚ್ಛ ಜಾತಿಯ ಯುವತಿ ಹಾಗೂ ದಲಿತ ಯುವಕನ ನಡುವಿನ ಪ್ರೇಮಕತೆಯನ್ನು ‘ದಡಕ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು ಕರಣ್ ಜೋಹರ್. ಇದೀಗ ಮತ್ತೊಮ್ಮೆ ಅದೇ ಮಾದರಿಯ ಮತ್ತೊಂದು ಪ್ರೇಮಕತೆಯನ್ನು ಕರಣ್ ನಿರ್ಮಿಸಿದ್ದು ಸಿನಿಮಾಕ್ಕೆ ‘ದಡಕ್ 2’ ಎಂದು ಹೆಸರಿಡಲಾಗಿದೆ.

ಮರಾಠಿಯ ‘ಸೈರಾಟ್’ ಸಿನಿಮಾ ಅನ್ನು ‘ದಡಕ್’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಆ ಸಿನಿಮಾನಲ್ಲಿ ಇಶಾನ್ ಕಟ್ಟರ್ ಮತ್ತು ಜಾನ್ಹವಿ ಕಪೂರ್ ನಟಿಸಿದ್ದರು. ಇದೀಗ ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾ ಅನ್ನು ‘ದಡಕ್ 2’ ಹೆಸರಿನಲ್ಲಿ ರೀಮೇಕ್ ಮಾಡಲಾಗಿದೆ. ದಲಿತ ಯುವಕನೊಬ್ಬ, ಮೇಲ್ವರ್ಗದ ಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಮೇಲ್ವರ್ಗದ ಯುವತಿಯ ಕಡೆಯವರು ದಲಿತ ಯುವಕನ ಮೇಲೆ ಮಾಡುವ ಸತತ ದಾಳಿ, ಆ ಯುವಕ ಅನುಭವಿಸುವ ನೋವು, ಕಡೆಗೆ ತಿರುಗಿ ಬೀಳುವ ಕತೆಯೇ ‘ಪರಿಯೇರುಮ್ ಪೆರುಮಾಳ್’. ಜಾತಿ ಮತ್ತು ಪ್ರೀತಿಯ ಕತೆಗಳನ್ನು ‘ದಡಕ್’ ಹೆಸರಿನಲ್ಲಿ ನಿರ್ಮಿಸಿ ಅದರದ್ದೇ ಆದ ಒಂದು ಸಿನಿಮಾ ಸರಣಿಯನ್ನು ಕರಣ್ ಸೃಷ್ಟಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಅಪ್ಪನ ವರ್ತನೆ ಬಗ್ಗೆ ಕರಣ್ ಜೋಹರ್ ಮಕ್ಕಳ ದೂರು ಕೇಳಿ

ಇದೀಗ ಈ ಸಿನಿಮಾ ಅನ್ನು ‘ದಡಕ್ 2’ ಹೆಸರಿನಲ್ಲಿ ಕರಣ್ ನಿರ್ಮಾಣ ಮಾಡಿದ್ದು, ಸಿನಿಮಾದ ನಾಯಕನಾಗಿ ಸಿದ್ಧಾಂತ್ ಚತುರ್ವೇದಿ ನಟಿಸಿದ್ದಾರೆ. ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಸಿನಿಮಾ ಅನ್ನು ಶಾಜಿಯಾ ಇಕ್ಬಾಲ್ ನಟಿಸಿದ್ದಾರೆ. ‘ಪರಿಯೇರುಮ್ ಪೆರುಮಾಳ್’ ಸಿನಿಮಾ ಅನ್ನು ಮಾರಿ ಸೆಲ್ವರಾಜ್ ನಿರ್ದೇಶನ ಮಾಡಿದ್ದರು. ಅದೇ ಕತೆ ಆಧರಿಸಿ, ಆದರೆ ಕೆಲವಾರು ಬದಲಾವಣೆಗಳ ಮೂಲಕ ಈ ಸಿನಿಮಾ ನಿರ್ಮಿಸಲಾಗಿದೆ. ‘ಪರಿಯೇರುಮ್ ಪೆರುಮಾಳ್’ ಸಿನಿಮಾನಲ್ಲಿ ನಾಯಿಯನ್ನು ಪ್ರಬಲವಾದ ರೂಪಕದಂತೆ ಬಳಸಲಾಗಿತ್ತು. ಆದರೆ ‘ದಡಕ್ 2’ನಲ್ಲಿ ಆ ರೀತಿಯ ಯಾವುದೇ ರೂಪಕಗಳು ಬಳಸಿಲ್ಲ ಎಂದು ತೋರುತ್ತದೆ. ಜೊತೆಗೆ ಸಿನಿಮಾ ಅನ್ನು ಕಮರ್ಶಿಯಲ್ ಕೋನದಿಂದಲೇ ನಿರ್ಮಿಸಿರುವುದು ಎದ್ದು ಕಾಣುತ್ತಿದೆ.

ಸಿನಿಮಾ ಅನ್ನು ಜೀ ಸ್ಟುಡಿಯೋಸ್, ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಮತ್ತು ಕ್ಲೌಡ್ 9 ಪಿಕ್ಚರ್ಸ್ ಸೇರಿ ನಿರ್ಮಾಣ ಮಾಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಹಾಡುಗಳು, ಕೆಲ ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ಸಿನಿಮಾ ಆಗಸ್ಟ್ 1 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ