
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೋಡಿಯನ್ನೇ ಮಾಡಿದೆ. ಅದ್ಧೂರಿ ಕಲೆಕ್ಷನ್ ಮಾಡಿರುವ ‘ಧುರಂಧರ್’ ಸಿನಿಮಾ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿದೆ. ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ ಎಂದು ಈಗಾಗಲೇ ಘೋಷಣೆ ಮಾಡಿ ಆಗಿದೆ. ವಿಶೇಷವೆಂದರೆ ಅದೇ ದಿನ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಹ ಬಿಡುಗಡೆ ಆಗಲಿಕ್ಕಿದೆ. ಎರಡು ದೊಡ್ಡ ಸಿನಿಮಾಗಳ ನಡುವೆ ದೊಡ್ಡ ಮಟ್ಟಿಗಿನ ಬಾಕ್ಸ್ ಆಫೀಸ್ ಕ್ಲ್ಯಾಷ್ ಆಗಲಿದೆ ಎಂದು ಪ್ರೇಕ್ಷಕರು ಎಣಿಸಿದ್ದರು ಆದರೆ ಈಗ ‘ಧುರಂಧರ್ 2’ ಸಿನಿಮಾ ಮುಂದೂಡಲ್ಪಡುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿಕ್ಕಿತ್ತು. ಆದರೆ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಲಿದೆ ಎನ್ನಲಾಗುತ್ತಿದೆ. ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿರುವ ಕಾರಣ, ‘ಧುರಂಧರ್ 2’ ಸಿನಿಮಾವನ್ನು ಇನ್ನಷ್ಟು ಅದ್ಧೂರಿಯಾಗಿ ಚಿತ್ರೀಕರಣ ಮಾಡಲು ಹಾಗೂ ಕೆಲವು ದೃಶ್ಯಗಳನ್ನು ಹೆಚ್ಚು ಹೈಲೆಟ್ ಮಾಡುವ ನಿರ್ಧಾರವನ್ನು ನಿರ್ದೇಶಕ ಆದಿತ್ಯ ಧರ್ ಮಾಡಿದ್ದು, ಹೀಗಾಗಿ ಶೂಟಿಂಗ್ಗೆ ತುಸು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದಾರೆ.
ಮತ್ತೊಂದು ವಿಶೇಷವೆಂದರೆ ‘ಧುರಂಧರ್’ ಸಿನಿಮಾನಲ್ಲಿ ಸಖತ್ ಹೈಲೆಟ್ ಆಗಿರುವ ಅಕ್ಷಯ್ ಖನ್ನ ಅವರ ಪಾತ್ರವನ್ನು ‘ಧುರಂಧರ್ 2’ ಸಿನಿಮಾಕ್ಕೂ ಮುಂದುವರೆಸಲಿದ್ದಾರೆ. ಅಕ್ಷಯ್ ಖನ್ನ ಅವರ ರೆಹಮಾನ್ ಡಕೈತ್ ಪಾತ್ರದ ಹಿನ್ನೆಲೆಯನ್ನು ತೋರಿಸುವ ಕಾರ್ಯವನ್ನು ‘ಧುರಂಧರ್ 2’ ಸಿನಿಮಾನಲ್ಲಿ ಮಾಡಲಿದ್ದಾರಂತೆ ಆದಿತ್ಯ ಧರ್, ಇದೇ ಕಾರಣಕ್ಕೆ ಅಕ್ಷಯ್ ಖನ್ನಾ ಅವರ ಒಂದು ವಾರದ ಕಾಲ್ಶೀಟ್ ಅನ್ನು ಸಹ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಜನಪ್ರಿಯತೆ ಎಫೆಕ್ಟ್: ಸತ್ತ ಪಾತ್ರವನ್ನು ಬದುಕಿಸಲಿದ್ದಾರಾ ‘ಧುರಂಧರ್ 2’ ನಿರ್ದೇಶಕ?
ಸಿನಿಮಾಕ್ಕೆ ಹೆಚ್ಚಿನ ಗುಣಮಟ್ಟವನ್ನು ಸೇರಿಸುವ ಪ್ರಯತ್ನ ಹಾಗೂ ಹೆಚ್ಚುವರಿ ದೃಶ್ಯಗಳು, ಬಲು ಅದ್ಧೂರಿ ಆಕ್ಷನ್ ಸೀಕ್ವೆನ್ಸ್ಗಳನ್ನು ಸೇರಿಸುವ ಪ್ರಯತ್ನವನ್ನು ಆದಿತ್ಯ ಧಾರ್ ಮಾಡುತ್ತಿದ್ದು ಇದೇ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಅಂದುಕೊಂಡಿದ್ದಕ್ಕಿಂತಲೂ ತಡ ಆಗಲಿದ್ದು, ಹಾಗಾಗಿ ಸಹಜವಾಗಿಯೇ ಸಿನಿಮಾದ ಬಿಡುಗಡೆ ತಡ ಆಗಲಿದೆ ಎನ್ನಲಾಗುತ್ತಿದೆ.
‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿರುವ ಕಾರಣ, ‘ಧುರಂಧರ್ 2’ ಸಿನಿಮಾಕ್ಕೆ ಸಹಜವಾಗಿಯೇ ಭಾರಿ ನಿರೀಕ್ಷೆ ಇದ್ದೇ ಇರುತ್ತದೆ. ‘ಟಾಕ್ಸಿಕ್’ ಸಿನಿಮಾ ಸಹ ಭಾರತದ ಪ್ರಸ್ತುತ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಆಗಿದೆ. ಒಂದೊಮ್ಮೆ ಎರಡೂ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗಿದ್ದಿದ್ದರೆ ಯಾವುದಾದರೂ ಒಂದು ಸಿನಿಮಾಕ್ಕೆ ನಷ್ಟವಂತೂ ಆಗಿರುತ್ತಿತ್ತು. ಈಗ ‘ಧುರಂಧರ್ 2’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿರುವುದು ಎರಡೂ ಸಿನಿಮಾಗಳಿಗೆ ಒಳಿತೇ ಆಗುವುದು ಪಕ್ಕಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ