ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು
Ranveer Singh: ಗೋವಾ ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ನಟ ರಣ್ವೀರ್ ಸಿಂಗ್ ಅವರು ದೈವಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದರು. ಅಲ್ಲದೆ, ಅನುಚಿತ ರೀತಿಯಲ್ಲಿ ದೈವದ ಅನುಕರಣೆ ಮಾಡಿದ್ದರು. ಇದರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇದೇ ಕಾರಣಕ್ಕೆ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಬಾಲಿವುಡ್ ನಟ ರಣ್ವೀರ್ ಸಿಂಗ್ (Ranveer Singh) ಇತ್ತೀಚೆಗಷ್ಟೆ ಮುಕ್ತಾಯವಾದ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ನಟ, ನಿರ್ದೇಶಕ ರಣ್ವೀರ್ ಸಿಂಗ್ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಕೊಂಡಾಡುತ್ತಾ, ತುಸು ಅತಿರೇಕದ ವರ್ತನೆ ತೋರಿದರು. ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳುತ್ತಾ, ಅನುಚಿತ ರೀತಿಯಲ್ಲಿ ದೈವದ ಅನುಕರಣೆ ಮಾಡಿದರು. ಅಷ್ಟು ಮಾತ್ರವೇ ಅಲ್ಲದೆ, ದೈವವನ್ನು ‘ಹೆಣ್ಣು ದೆವ್ವ’ ಎಂದು ಸಹ ಕರೆದರು. ರಣ್ವೀರ್ ಅವರ ಈ ನಡೆಗೆ ತೀವ್ರ ವಿರೋಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ರಣ್ವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ರಣ್ವೀರ್ ವಿರುದ್ಧ ದೂರು ದಾಖಲಿಸಲಾಗಿದೆ. ಹಿಂದು ಜನಜಾಗೃತಿ ಸಮಿತಿ (ಎಚ್ಜೆಎಸ್) ರಣ್ವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದ್ದು, ರಣ್ವೀರ್ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ರಣ್ವೀರ್ ಸಿಂಗ್ ಅವರು ದೈವವನ್ನು ದೆವ್ವ ಎಂದು ಕರೆಯುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಚಾವುಂಡಿ’ ದೈವವು ಭಕ್ತರಿಗೆ ಪೂಜನೀಯವಾಗಿದ್ದು, ತುಳು ಸಮುದಾಯಕ್ಕೆ ಅತ್ಯಂತ ಮಹತ್ವದ ದೈವವಾಗಿದೆ. ಆದರೆ ದೈವವನ್ನು ಕೆಟ್ಟ ರೀತಿಯಲ್ಲಿ ರಣ್ವೀರ್ ಅನುಕರಣೆ ಮಾಡಿದ್ದಾರೆ. ರಣ್ವೀರ್ ಸಿಂಗ್ ಅವರ ಈ ರೀತಿಯ ನಡೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರವಲ್ಲದೆ, ಸಾರ್ವಜನಿಕ ಶಾಂತಿಯನ್ನು ಕದಡುವ ಕಾರ್ಯವಾಗಿದೆ. ಈ ಕುರಿತು ತನಿಖೆಯನ್ನು ಮಾಡಿ, ನಟನ ವಿಚಾರಣೆ ನಡೆಸಿ, ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ
ತಮ್ಮ ಮಾತು ಮತ್ತು ನಡೆ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೆ ನಟ ರಣ್ವೀರ್ ಸಿಂಗ್ ಅವರು ಈ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ರಣ್ವೀರ್ ಸಿಂಗ್, ‘ವೀರ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಕ್ಷಮೆ ಕೇಳಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದ್ದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:48 am, Tue, 2 December 25




