ಜನಪ್ರಿಯತೆ ಎಫೆಕ್ಟ್: ಸತ್ತ ಪಾತ್ರವನ್ನು ಬದುಕಿಸಲಿದ್ದಾರಾ ‘ಧುರಂಧರ್ 2’ ನಿರ್ದೇಶಕ?
ಸೂಪರ್ ಹಿಟ್ ‘ಧುರಂಧರ್’ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಮಾರ್ಚ್ 19ಕ್ಕೆ ‘ಧುರಂಧರ್ 2’ ತೆರೆಕಾಣಲಿದೆ. ಮೊದಲ ಪಾರ್ಟ್ನಲ್ಲಿ ಅಕ್ಷಯ್ ಖನ್ನಾ ಅವರು ಮಾಡಿದ ರೆಹಮಾನ್ ಡಕಾಯಿತ್ ಪಾತ್ರದ ಅಂತ್ಯವಾಗಿದೆ. ಆದರೆ 2ನೇ ಪಾರ್ಟ್ನಲ್ಲಿ ಆ ಪಾತ್ರವನ್ನು ಮುಂದುವರಿಸುವ ಆಲೋಚನೆಯಲ್ಲಿದ್ದಾರೆ ನಿರ್ದೇಶಕ ಆದಿತ್ಯ ಧಾರ್.

ನಟ ಅಕ್ಷಯ್ ಖನ್ನಾ ಅವರು ‘ಧುರಂಧರ್’ (Dhurandhar) ಸಿನಿಮಾದಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ರೆಹಮಾನ್ ಡಕಾಯಿತ್ ಎಂಬ ಗ್ಯಾಂಗ್ಸ್ಟರ್ ಪಾತ್ರವನ್ನು ಮಾಡಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಕೂಡ ಸಿದ್ಧವಾಗುತ್ತಿದೆ. ಮಾರ್ಚ್ 19ರಂದು ‘ಧುರಂದರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಲಿದೆ. ಸೀಕ್ವೆಲ್ನಲ್ಲಿ ಅಕ್ಷಯ್ ಖನ್ನಾ (Akshaye Khanna) ಪಾತ್ರ ಇರುವುದಿಲ್ಲ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಯಾಕೆಂದರೆ, ಮೊದಲ ಪಾರ್ಟ್ನಲ್ಲೇ ರೆಹಮಾನ್ ಡಕಾಯಿತ್ ಪಾತ್ರ ಸಾಯುತ್ತದೆ. ಆದರೆ ಈಗ ಹೊಸ ಗುಸುಗುಸು ಕೇಳಿಬಂದಿದೆ.
‘ಧರಂಧರ್’ ಸಿನಿಮಾ ಗೆಲ್ಲಲು ಅಕ್ಷಯ್ ಖನ್ನಾ ಅವರ ನಟನೆ ಕೂಡ ಕಾರಣ. ಸಿನಿಮಾದ ಹೀರೋ ರಣವೀರ್ ಸಿಂಗ್ ಅವರಿಗಿಂತಲೂ ಅಕ್ಷಯ್ ಖನ್ನಾ ಪಾತ್ರವೇ ಹೆಚ್ಚು ಹೈಲೈಟ್ ಆಗಿದೆ. ಅಕ್ಷಯ್ ಖನ್ನಾ ಅವರ ನಟನೆಯನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಅವರ ಡ್ಯಾನ್ಸ್ ಕೂಡ ವೈರಲ್ ಆಗಿದೆ. ಒಟ್ಟಿನಲ್ಲಿ ಅವರು ಹೊಸ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.
ಈ ಜನಪ್ರಿಯತೆಯ ಪರಿಣಾಮವಾಗಿ ‘ಧುರಂದರ್ 2’ ಸಿನಿಮಾದಲ್ಲಿ ಕೂಡ ರೆಹಮಾನ್ ಡಕಾಯಿತ್ ಪಾತ್ರವನ್ನು ಮುಂದುವರಿಸುವ ಬಗ್ಗೆ ನಿರ್ದೇಶಕ ಆದಿತ್ಯ ಧಾರ್ ಅವರು ಆಲೋಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ‘ಧುರಂಧರ್’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರೆಹಮಾನ್ ಡಕಾಯಿತ್ ಪಾತ್ರ ಸತ್ತಿದ್ದರೂ ಕೂಡ ‘ಧುರಂಧರ್ 2’ ಚಿತ್ರದಲ್ಲಿ ಆ ಪಾತ್ರ ಮತ್ತೆ ಬರಲಿದೆ ಎನ್ನಲಾಗಿದೆ.
‘ಧುರಂಧರ್ 2’ ಚಿತ್ರಕ್ಕಾಗಿ ಅಕ್ಷಯ್ ಖನ್ನಾ ಅವರು ಒಂದು ವಾರಗಳ ಕಾಲ್ ಶೀಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಕೆಲವು ಫ್ಲ್ಯಾಶ್ಬ್ಯಾಕ್ ದೃಶ್ಯಗಳ ಮೂಲಕ ರೆಹಮಾನ್ ಡಕಾಯಿತ್ ಪಾತ್ರವನ್ನು ಮತ್ತೆ ಜನರಿಗೆ ತೋರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಈ ವಿಷಯ ಕೇಳಿ ಅಕ್ಷಯ್ ಖನ್ನಾ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ದೇವರ ಮಗ: ಸಿಕ್ಕಾಪಟ್ಟೆ ಹೊಗಳಿದ ವಿವೇಕ್ ಅಗ್ನಿಹೋತ್ರಿ
ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾದ ಎದುರು ‘ಧುರಂಧರ್ 2’ ಬಿಡುಗಡೆ ಆಗಲಿದೆ. ಆದ್ದರಿಂದ ಪೈಪೋಟಿ ಜೋರಾಗಿ ಇರಲಿದೆ. ಜನರ ನಿರೀಕ್ಷೆ ಕೂಡ ಡಬಲ್ ಆಗಿದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಅಕ್ಷಯ್ ಖನ್ನಾ ಅವರ ಪಾತ್ರವನ್ನು ಮುಂದುವರಿಸಲಾಗುತ್ತಿದೆ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




