ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ!
‘ಧುರಂಧರ್’ ಸಿನಿಮಾದ ಯಶಸ್ಸಿನಿಂದ ಬಾಲಿವುಡ್ ನಟ ಅಕ್ಷಯ್ ಖನ್ನಾ ಅವರು ಸೂಪರ್ ಸ್ಟಾರ್ ಆಗಿದ್ದಾರೆ. 2025ರಲ್ಲಿ ಅವರು ನಟಿಸಿದ ಎರಡು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿ ಅಪಾರ ಖ್ಯಾತಿ ತಂದುಕೊಟ್ಟಿವೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಅಪರೂಪದ ದಾಖಲೆ ಮಾಡಿದ್ದಾರೆ.

ನಟ ಅಕ್ಷಯ್ ಖನ್ನಾ (Akshaye Khanna) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೋ, ಪೋಷಕ ಪಾತ್ರ ಹಾಗೂ ವಿಲನ್ ಆಗಿ ಕೂಡ ಅವರು ಜನಮನ ಗೆದ್ದಿದ್ದಾರೆ. ಅಕ್ಷಯ್ ಖನ್ನಾ ಅವರಿಗೆ 2025ರ ವರ್ಷ ತುಂಬಾ ಸ್ಪೆಷಲ್ ಆಗಿತ್ತು. ಅವರು ನಟಿಸಿದ ಎರಡು ಸಿನಿಮಾಗಳು ಸೂಪರ್ ಹಿಟ್ ಆದವು. ‘ಛಾವ’ ಮತ್ತು ‘ಧುರಂಧರ್’ (Dhurandhar) ಸಿನಿಮಾದಲ್ಲಿ ಅಕ್ಷಯ್ ಖನ್ನಾ ವಿಲನ್ ಪಾತ್ರ ಮಾಡಿದ್ದಾರೆ. ಈ ಸಿನಿಮಾಗಳಿಂದ ಆಗಿರುವ ಒಟ್ಟು ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ಮೀರಿದೆ. ಇದರಿಂದಾಗಿ ಅಕ್ಷಯ್ ಖನ್ನಾ ಅವರ ಖ್ಯಾತಿ ಹೆಚ್ಚಾಗಿದೆ.
‘ಛಾವ’ ಸಿನಿಮಾ 2025ರ ಫೆಬ್ರವರಿ 14ರಂದು ಬಿಡುಗಡೆ ಆಯಿತು. ಆ ಸಿನಿಮಾಗೆ ವಿಕ್ಕಿ ಕೌಶಲ್ ಹೀರೋ. ಐತಿಹಾಸಿಕ ಕಥಾಹಂದರ ಹೊಂದಿದ್ದ ಆ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಔರಂಗಜೇಬ್ ಪಾತ್ರವನ್ನು ಮಾಡಿದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಚಿತ್ರದ ಗೆಲುವಿನಲ್ಲಿ ಅಕ್ಷಯ್ ಖನ್ನಾ ಅವರ ಕೊಡುಗೆ ಕೂಡ ದೊಡ್ಡದಿದೆ. ಆ ಸಿನಿಮಾ ವಿಶ್ವಾದ್ಯಂತ 809 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ರಿಲೀಸ್ ಆಯಿತು. ರಣವೀರ್ ಸಿಂಗ್ ಅವರು ಹೀರೋ ಆಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ವಿಲನ್ ಪಾತ್ರ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ಪಾತ್ರದಲ್ಲಿ ಅವರು ಜೀವಿಸಿದ್ದಾರೆ. ‘ಧುರಂಧರ್’ ನೋಡಿದ ಎಲ್ಲರೂ ಅಕ್ಷಯ್ ಖನ್ನಾ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ 1167 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ 1200 ಕೋಟಿ ರೂಪಾಯಿ ಆಗಲಿದೆ. ‘ಛಾವ’ ಚಿತ್ರದ ಗಳಿಕೆಯನ್ನೂ ಸೇರಿಸಿದರೆ ಅಕ್ಷಯ್ ಖನ್ನಾ ನಟಿಸಿದ ಈ ಸಿನಿಮಾಗಳ ಒಟ್ಟು ಕಲೆಕ್ಷನ್ 2000 ಕೋಟಿ ರೂಪಾಯಿ ಆಗುತ್ತದೆ. ಆ ಮೂಲಕ ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಅಭಿನಯದ ಸಿನಿಮಾಗಳಿಂದ 2 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆದಂತೆ ಆಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್ಕುಮಾರ್
ಈ ರೀತಿ ಸಾಧನೆ ಮಾಡಿದ ಮತ್ತೋರ್ವ ನಟ ಎಂದರೆ ಅದು ಶಾರುಖ್ ಖಾನ್. ಅವರು ನಟಿಸಿದ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು 2023ರಲ್ಲಿ ಬಿಡುಗಡೆ ಆದವು. ಈ ಮೂರು ಸಿನಿಮಾಗಳಿಂದ 2685 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಹಾಗಾಗಿ ಅವರು ನಂಬರ್ ಸ್ಥಾನದಲ್ಲಿ ಇದ್ದಾರೆ. ಈಗ ಅಕ್ಷಯ್ ಖನ್ನಾ ಅವರಿಗೆ ‘ಧುರಂಧರ್’ ಮತ್ತು ‘ಛಾವ’ ಸಿನಿಮಾಗಳಿಂದ 2ನೇ ಸ್ಥಾನ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




