ಭಾರತದಲ್ಲಿ 30 ದಿನಕ್ಕೆ ‘ಧುರಂಧರ್’ ಕಲೆಕ್ಷನ್ 759 ಕೋಟಿ ರೂ; ವಿಶ್ವಾದ್ಯಂತ 1167 ಕೋಟಿ
ಎಷ್ಟೇ ಹೊಸ ಸಿನಿಮಾಗಳು ಬಿಡುಗಡೆ ಆದರೂ ‘ಧುರಂಧರ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ನಿಂತಿಲ್ಲ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ವಿಶ್ವಾದ್ಯಂತ 1167 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ದಾಖಲೆಯನ್ನು ಕೂಡ ಈಗ ‘ಧುರಂಧರ್’ ಅಳಿಸಿ ಹಾಕಿದೆ.

ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಹೊಸ ದಾಖಲೆಗಳನ್ನು ಬರೆದಿರುವ ‘ಧುರಂಧರ್’ (Dhurandhar) ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದಿತ್ಯ ಧಾರ್ ನಿರ್ದೇಶನ ಮಾಡಿರುವ ಈ ಸಿನಿಮಾದಿಂದ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಬಿಡುಗಡೆಯಾಗಿ 30 ದಿನ ಕಳೆದರೂ ಸಹ ‘ಧುರಂಧರ್’ ಕ್ರೇಜ್ ಕಡಿಮೆ ಆಗಿಲ್ಲ. 20ನೇ ದಿನ ಕೂಡ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (Box Office Collection) ಮಾಡಿದೆ. ಈವರೆಗೂ ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 759 ಕೋಟಿ ರೂಪಾಯಿ ಆಗಿದೆ. ವಿಶಾದ್ಯಂತ 1167 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಇನ್ನು ಕೆಲವೇ ದಿನಗಳಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 800 ಕೋಟಿ ರೂಪಾಯಿ ಮೀರಲಿದೆ. ವಿಶ್ವಾದ್ಯಂತ 1200 ಕೋಟಿ ಆಗಲಿದೆ. ಆ ಮೂಲಕ ಹೊಸ ದಾಖಲೆಯನ್ನು ಈ ಸಿನಿಮಾ ಸೃಷ್ಟಿ ಮಾಡಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಆದಾಯ ಹರಿದುಬರುತ್ತಿದೆ.
ರಣವೀರ್ ಸಿಂಗ್, ಅರ್ಜುನ್ ರಾಮ್ಪಾಲ್, ಸಾರಾ ಅರ್ಜುನ್, ಸಂಜಯ್ ದತ್, ಅಕ್ಷಯ್ ಖನ್ನಾ ಮುಂತಾದವರು ‘ಧುರಂಧರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಿಂದಾಗಿ ಎಲ್ಲ ಕಲಾವಿದರ ಬೇಡಿಕೆ ಹೆಚ್ಚಾಗಿದೆ. ಇಷ್ಟು ದೊಡ್ಡ ಗೆಲುವು ಸಿಕ್ಕಿದ್ದರಿಂದ ಎಲ್ಲ ನಟ-ನಟಿಯರಿಗೆ ದೊಡ್ಡ ದೊಡ್ಡ ಆಫರ್ಗಳು ಬರಲು ಆರಂಭ ಆಗಿದೆ. ಎಲ್ಲ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ‘ಧುರಂಧರ್’ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ.
ಚೀನಾ ಮಾರುಕಟ್ಟೆಯನ್ನು ಹೊರತುಪಡಿಸಿ, ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರಕ್ಕಿತ್ತು. ಈಗ ಆ ದಾಖಲೆಯು ‘ಧುರಂಧರ್’ ಸಿನಿಮಾದ ಪಾಲಾಗಿದೆ. 2023ರಲ್ಲಿ ಬಿಡುಗಡೆ ಆದ ‘ಜವಾನ್’ ಸಿನಿಮಾ ವಿಶ್ವಾದ್ಯಂತ 1600 ಕೋಟಿ ರೂಪಾಯಿ ಗಳಿಸಿತ್ತು. ‘ಧುರಂಧರ್’ ಸಿನಿಮಾ ಈಗಾಗಲೇ 1167 ಕೋಟಿ ರೂಪಾಯಿ ದಾಟಿದೆ.
ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್ಕುಮಾರ್
ನಟ ಅಕ್ಷಯ್ ಖನ್ನಾ ಅವರು ‘ಧುರಂಧರ್’ ಸಿನಿಮಾದಿಂದ ಸೂಪರ್ ಸ್ಟಾರ್ ಆಗಿದ್ದಾರೆ. ಅವರು ವಿಲನ್ ಪಾತ್ರ ಮಾಡಿದ್ದರೂ ಕೂಡ ಮಿಂಚುತ್ತಿದ್ದಾರೆ. ನಟಿ ಸಾರಾ ಅರ್ಜುನ್ ಅವರು ಕೂಡ ಸಖತ್ ಜನಪ್ರಿಯತೆ ಪಡೆದಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆ ಡಬಲ್ ಆಗಿದೆ. ‘ಧುರಂಧರ್’ ಸಿನಿಮಾ ಒಟಿಟಿಗೆ ಬರಲಿ ಎಂದು ಕೂಡ ಪ್ರೇಕ್ಷಕರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




