ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್ಕುಮಾರ್
‘45’ ಸಿನಿಮಾದ ಹಿಂದಿ ವರ್ಷನ್ ಬಿಡುಗಡೆ ಪ್ರಯುಕ್ತ ಮುಂಬೈನಲ್ಲಿ ಚಿತ್ರತಂಡದ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದಾರೆ. ಶಿವರಾಜ್ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ‘ಧುರಂಧರ್’ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ. ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅವರ ಅಭಿನಯವನ್ನು ಶಿವರಾಜ್ಕುಮಾರ್ ಅವರು ಬಹಳ ಮೆಚ್ಚಿಕೊಂಡಿದ್ದಾರೆ.

ನಟ ಶಿವರಾಜ್ಕುಮಾರ್ ಅವರು ಮುಂಬೈಗೆ ತೆರಳಿದ್ದಾರೆ. ಕನ್ನಡದ ‘45’ ಸಿನಿಮಾ (45 Movie) ಹಿಂದಿಯಲ್ಲಿ ಕೂಡ ಬಿಡುಗಡೆ ಆಗಲಿದ್ದು, ಆ ಚಿತ್ರದ ಪ್ರಚಾರವನ್ನು ಅವರು ಮುಂಬೈನಲ್ಲಿ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಭಾಗಿಯಾಗಿದ್ದಾರೆ. ಈ ವೇಳೆ ಅವರಿಗೆ ‘ಧುರಂಧರ್’ (Dhurandhar) ಸಿನಿಮಾ ಬಗ್ಗೆ ಹೇಳಲಾಯಿತು. ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಆ ಸಿನಿಮಾದಲ್ಲಿ ತಮಗೆ ಏನು ಇಷ್ಟ ಆಯಿತು ಎಂಬುದನ್ನು ಶಿವರಾಜ್ಕುಮಾರ್ (Shivarajkumar) ಅವರು ವಿವರಿಸಿದ್ದಾರೆ.
‘ಧುರಂಧರ್ ಸಿನಿಮಾ ಬಹಳ ಚೆನ್ನಾಗಿದೆ. ಸಿನಿಮಾದ ಮೇಕಿಂಗ್ ಮತ್ತು ಎಮೋಷನ್ ಚೆನ್ನಾಗಿದೆ. ಎಲ್ಲರ ನಟನೆ ಅತ್ಯುತ್ತಮವಾಗಿದೆ. ಅಕ್ಷಯ್ ಖನ್ನಾ ನಟನೆ ನನಗೆ ಇಷ್ಟ ಆಯಿತು. ಹಾಗೆಯೇ ರಣವೀರ್ ಸಿಂಗ್ ಕೂಡ ಅಮೇಜಿಂಗ್. ಪಾತ್ರಕ್ಕೆ ಬೇಕಾದ ಸೂಕ್ಷ್ಮವಾದ ಅಭಿನಯವನ್ನು ಅವರು ನೀಡಿದ್ದಾರೆ. ಏನು ಬೇಕಾದರೂ ಮಾಡುವ ಅವಕಾಶ ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ ಇದೆ. ಆದರೆ ರಣವೀರ್ ಸಿಂಗ್ ಮಾಡಿದ ಪಾತ್ರ ಅಷ್ಟು ಸುಲಭವಲ್ಲ’ ಎಂದು ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.
ಈ ಮೊದಲೇ ಶಿವರಾಜ್ಕುಮಾರ್ ಅವರಿಗೆ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ನಟಿಸಿರಲಿಲ್ಲ. ‘ಈಗ ಒಂದು ವೇಳೆ ಬಾಲಿವುಡ್ ಸಿನಿಮಾ ಮಾಡುವುದಾದರೆ ಅದು ಹಾಡು, ಡ್ಯಾನ್ಸ್ ಇರುವ ಕಮರ್ಷಿಯಲ್ ಸಿನಿಮಾ ಆಗಿರಬೇಕು. ಆ ಮೂಲಕ ಜನರ ಹೃದಯವನ್ನು ತಲುಪಬೇಕು. ಜನರು ನನ್ನನ್ನು ಪಾತ್ರವಾಗಿ ನೋಡಬೇಕು. ಭಾರತೀಯ ಸಂಸ್ಕೃತಿಯ ಭಾಗ ಆಗಿರಬೇಕು’ ಎಂದಿದ್ದಾರೆ ಶಿವಣ್ಣ.
ಕನ್ನಡ ಚಿತ್ರರಂಗವನ್ನು ಬಾಲಿವುಡ್ ಮಂದಿ ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ: ಚಾಪ್ಟರ್ 1’ ಮುಂತಾದ ಸಿನಿಮಾಗಳ ಮೂಲಕ ಗುರುತಿಸುತ್ತಾರೆ. ಆ ಸಿನಿಮಾಗಳಿಂದಾಗಿ ಕನ್ನಡ ಚಿತ್ರರಂಗದ ಬಗ್ಗೆ ಹಿಂದಿ ಪ್ರೇಕ್ಷಕರು ಕೂಡ ಮಾತನಾಡುವಂತಾಗಿದೆ. ‘ನಮಗೆ ಆ ಸಿನಿಮಾಗಳ ಯಶಸ್ಸಿನಿಂದ ಹೆಮ್ಮೆ ಆಗಿದೆ. ಅವರು ಪ್ರಯತ್ನ ಮಾಡದೇ ಇದ್ದಿದ್ದರೆ ಈ ಸಿನಿಮಾಗಳು ಇಲ್ಲಿಗೆ ಬರುತ್ತಿರಲಿಲ್ಲ. ಅವರು ಧೈರ್ಯ ತೋರಿಸಿದರು. ಈಗ ನಾವು 45 ಸಿನಿಮಾ ತಂಡದವರು ಬಂದಿದ್ದೇವೆ. ಏನಾಗುತ್ತದೋ ನೋಡೋಣ’ ಎಂದು ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ?
ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ‘45’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿದ್ದಾರೆ. ಉಪೇಂದ್ರ, ರಾಜ್ ಬಿ. ಶೆಟ್ಟಿ, ಶಿವರಾಜ್ಕುಮಾರ್ ಅವರು ಒಟ್ಟಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರಚಾರ ಕಾರ್ಯದಲ್ಲಿ ಶಿವಣ್ಣ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




