‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

ದಿನದಿಂದ ದಿನಕ್ಕೆ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಆತಂಕ ಹೆಚ್ಚಾಗುತ್ತಿದೆ. ಸಲ್ಮಾನ್ ಖಾನ್, ರೋಹಿತ್ ಶೆಟ್ಟಿ ಬಳಿಕ ರಣವೀರ್ ಸಿಂಗ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ರಣವೀರ್ ಸಿಂಗ್ ಅವರಿಗೆ ಬೆದರಿಕೆ ಸಂದೇಶ ಕಳಿಸಿ, ಹಣಕ್ಕೆ ಬೇಡಿಕೆ ಇಡಲಾಗಿದೆ. ನಟನ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು
Ranveer Singh

Updated on: Feb 10, 2026 | 10:06 PM

ಕೆಲವೇ ದಿನಗಳ ಹಿಂದೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಬೆದರಿಕೆ ಹಾಕಲಾಗಿದೆ. ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಣವೀರ್ ಸಿಂಗ್, ದೀಪಿಕಾ ಪಡುಕೋಣೆ (Deepika Padukone) ದಂಪತಿಯ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ. ಬೆದರಿಕೆ ಬಂದಿರುವುದರಿಂದ ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಆತಂಕ ಆಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಮೊದಲು ಬಾಲಿವುಡ್​​ನ ಹಲವು ಸೆಲೆಬ್ರಿಟಿಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬೆದರಿಕೆ ಹಾಕಿದ್ದರು. ಈಗಲೂ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೇ ಬೆದರಿಕೆ ಸಂದೇಶ ಕಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆದರಿಕೆ ಸಂದೇಶ ಬಂದ ಬಳಿಕ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಮನೆಯ ಸುತ್ತಮುತ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಭದ್ರತೆ ನೀಡುವ ದೃಷ್ಟಿಯಿಂದ ರಣವೀರ್ ಸಿಂಗ್ ನಿವಾಸದ ಬಳಿ ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ಒಡಾಡುತ್ತಿದ್ದಾರೆ. ಇದರಿಂದಾಗಿ ನೆರೆಹೊರೆಯವರಿಗೆ ಆತಂಕ ಹೆಚ್ಚಾಗಿದೆ. ಅಪಾರ್ಟ್​​ಮೆಂಟ್​​ನಲ್ಲಿ ಇರುವ ಇನ್ನುಳಿದ ನಿವಾಸಿಗಳು ಈ ಬಗ್ಗೆ ಪೊಲೀಸರ ಬಳಿ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಿರುವ ಕಿಡಿಗೇಡಿಗಳು ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ವಾಟ್ಸಪ್ ವಾಯ್ಸ್ ನೋಟ್ ಮೂಲಕ ಅವರಿಗೆ ಬೆದರಿಕೆ ಹಾಕಲಾಗಿದೆ. ಬೆದರಿಕೆ ಸಂದೇಶ ಬಂದ ಕೂಡಲೇ ರಣವೀರ್ ಸಿಂಗ್ ಅವರು ಮುಂಬೈ ಪೊಲೀಸರಿಗೆ ಮಾಹಿತಿ ತಿಳಿಸಿದರು. ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ.

ಇದನ್ನೂ ಓದಿ: ‘ಗೋಲ್​​ಮಾಲ್’ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ

ಕಳೆದ ವರ್ಷ ಬಿಡುಗಡೆ ಆದ ‘ಧುರಂಧರ್’ ಸಿನಿಮಾದಿಂದ ರಣವೀರ್ ಸಿಂಗ್ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಚಿತ್ರರಂಗದಲ್ಲಿ ಅವರಿಗೆ ಇರುವ ಬೇಡಿಕೆ ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಕೂಡ ಜಾಸ್ತಿ ಆಗಿದೆ. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ರಣವೀರ್ ಸಿಂಗ್ ಬಳಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಬೆದರಿಕೆ ಸಂದೇಶ ಕಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us