ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ ಆರೋಪ ಸುಕೇಶ್ ಚಂದ್ರಶೇಖರ್ (Sukesh Chandrasekhar) ಮೇಲಿದೆ. ಆ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಕೇಸ್ನಲ್ಲಿ ಬಾಲಿವುಡ್ ಸುಂದರಿಯರಾದ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮತ್ತು ನೋರಾ ಫತೇಹಿ ಅವರ ಹೆಸರು ಕೂಡ ಆಗಾಗ ಸುದ್ದಿ ಆಗುತ್ತದೆ. ಸುಕೇಶ್ ಮತ್ತು ಜಾಕ್ವೆಲಿನ್ ನಡುವೆ ಪ್ರೀತಿ-ಪ್ರೇಮ ಇತ್ತು ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸಿವೆ. ಒಟ್ಟಾರೆ ಸುಕೇಶ್ ಚಂದ್ರಶೇಖರ್ ಜೀವನವೇ ಕೌತುಕಮಯವಾಗಿದೆ. ಅವರ ಜೀವನದ ಕುರಿತು ಸಿನಿಮಾ ಅಥವಾ ವೆಬ್ ಸಿರೀಸ್ ಮಾಡಲು ನಿರ್ದೇಶಕ ಆನಂದ್ ಕುಮಾರ್ (Director Anand Kumar) ನಿರ್ಧರಿಸಿದ್ದಾರೆ. ಆದರೆ ಇದನ್ನು ಬಯೋಪಿಕ್ ಎಂದು ಕರೆಯಲು ಅವರು ಸಿದ್ಧರಿಲ್ಲ. ತಮ್ಮ ಈ ಹೇಳಿಕೆಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ಬದುಕಿನ ವಿವರಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿ ಆನಂದ್ ಕುಮಾರ್ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕುರಿತಾಗಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಬಯೋಪಿಕ್ ಮಾಡೋದು ಮಹಾನ್ ವ್ಯಕ್ತಿಗಳ ಜೀವನದ ಕುರಿತು. ಆದರೆ ಈತ ವಂಚಕ. ಇವನನ್ನು ಅಮರವಾಗಿಸುವ ಉದ್ದೇಶ ನನಗಿಲ್ಲ’ ಎಂದು ಆನಂದ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಸುಕೇಶ್ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್; ಕತ್ತಿನ ಮೇಲಿರುವ ಅಚ್ಚೇನು?
ಸುಕೇಶ್ ಚಂದ್ರಶೇಖರ್ ಬಗ್ಗೆ ಮಾಹಿತಿ ಕಲೆ ಹಾಕಲು ತಿಹಾರ್ ಜೈಲಿನ ಹಿರಿಯ ಪೊಲೀಸ್ ಆಧಿಕಾರಿಗಳನ್ನು ಆನಂದ್ ಕುಮಾರ್ ಭೇಟಿ ಆಗಿದ್ದಾರೆ. ಅಲ್ಲಿ ಸೂಕ್ತ ರೀತಿಯಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಸಿಗುವ ಮಾಹಿತಿಯ ಆಧಾರದಲ್ಲಿ ಅದನ್ನು ಸಿನಿಮಾ ಮಾಡಬೇಕೋ ಅಥವಾ ವೆಬ್ ಸಿರೀಸ್ ಮಾಡಬೇಕೋ ಎಂಬುದನ್ನು ಅವರು ನಂತರದಲ್ಲಿ ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: ‘ಜಾಕ್ವೆಲಿನ್ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್ ಚಂದ್ರಶೇಖರ್ ಹೊಸ ಪುರಾಣ
‘ಆತ 10ರಿಂದ 12 ಭಾಷೆ ಮಾತನಾಡುತ್ತಾನೆ. ಅದಕ್ಕೂ ಹೆಚ್ಚಿನ ಭಾಷೆ ತಿಳಿದಿರಬಹುದು. ಜನರನ್ನು ಅವನು ವಂಚಿಸುವ ರೀತಿಯೇ ಭಿನ್ನ. ಈ ಹಗರಣ ಆಗುವುದಕ್ಕೂ ಮುನ್ನ ಅವನು ಹಲವು ವರ್ಷಗಳ ಕಾಲ ಪ್ಲ್ಯಾನ್ ಮಾಡಿದ್ದ. ಇಂಥ ದೊಡ್ಡ ವಂಚನೆ ಹೇಗೆ ನಡೆಯಿತು? ಅವನ ಮಾಸ್ಟರ್ ಮೈಂಡ್ ಹೇಗಿತ್ತು ಎಂಬುದನ್ನು ನಾನು ಜನರಿಗೆ ತೋರಿಸಬೇಕು’ ಎಂದಿದ್ದಾರೆ ಆನಂದ್ ಕುಮಾರ್.
ಇದನ್ನೂ ಓದಿ: ಜಾಕ್ವೆಲಿನ್ಗೆ ನೀಡಿದ ಉಡುಗೊರೆ ಲಿಸ್ಟ್ ತೆಗೆದಿಟ್ಟ ಸುಕೇಶ್ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?
ಸುಕೇಶ್ ಕುರಿತು ನಿರ್ಮಾಣ ಆಗಲಿರುವ ಸಿನಿಮಾ ಅಥವಾ ವೆಬ್ ಸಿರೀಸ್ನಲ್ಲಿ ಬೇರೆ ಸೆಲೆಬ್ರಿಟಿಗಳ ಹೆಸರು ಪ್ರಸ್ತಾಪ ಆಗುತ್ತೋ ಅಥವಾ ಇಲ್ಲವೋ ಎಂಬ ಕೌತುಕ ಮೂಡಿದೆ. ಸದ್ಯ ಇದಿನ್ನೂ ಪ್ಲ್ಯಾನಿಂಗ್ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.