ಫರಾಹ್ ಖಾನ್ ಅಡುಗೆಯವ ದಿಲೀಪ್ ತಿಂಗಳ ಸಂಬಳ ಎಷ್ಟು ಲಕ್ಷ ಗೊತ್ತೆ?

Farah Khan cook Dilip: ಫರಾಹ್ ಖಾನ್ ಬಾಲಿವುಡ್​ನ ಖ್ಯಾತ ನಿರ್ದೇಶಕಿ ಮತ್ತು ಡ್ಯಾನ್ಸ್ ಕೊರಿಯೋಗ್ರಫರ್. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಮಾಡಿರುವ ಫರಾಹ್ ಖಾನ್, ತಮ್ಮ ವಿಡಿಯೋಗಳಲ್ಲಿ ತಮ್ಮ ಅಡುಗೆಯವ ದಿಲೀಪ್ ಅನ್ನು ಕರೆತರುತ್ತಾರೆ. ದಿಲೀಪ್, ಫರಾಹ್ ಖಾನ್ ಅವರಷ್ಟೆ ಜನಪ್ರಿಯರಾಗಿದ್ದಾರೆ. ಅಂದಹಾಗೆ ಫರಾಹ್ ಖಾನ್ ಅಡುಗೆಯವ ದಿಲೀಪ್ ಅವರ ಸಂಬಳ ಎಷ್ಟು ಗೊತ್ತೆ?

ಫರಾಹ್ ಖಾನ್ ಅಡುಗೆಯವ ದಿಲೀಪ್ ತಿಂಗಳ ಸಂಬಳ ಎಷ್ಟು ಲಕ್ಷ ಗೊತ್ತೆ?
Farah Khan Dilip

Updated on: Sep 21, 2025 | 4:43 PM

ಫರಾಹ್ ಖಾನ್, ಬಾಲಿವುಡ್​​ನ (Bollywood) ಖ್ಯಾತ ನೃತ್ಯ ಕೊರಿಯೋಗ್ರಾಫರ್ ಮತ್ತು ಸಿನಿಮಾ ನಿರ್ದೇಶಕಿ ಸಹ ಹೌದು. ಹಲವು ರಿಯಾಲಿಟಿ ಶೋಗಳ ಜಡ್ಜ್ ಸಹ ಆಗಿರುವ ಫರಾಹ್ ಖಾನ್ ತಮ್ಮ ತಮಾಷೆಯ ಪ್ರವೃತ್ತಿಯಿಂದ, ಹಾಸ್ಯಮಯ ಮಾತುಗಳಿಂದ ಬಾಲಿವುಡ್​ನ ಎಲ್ಲರಿಗೂ ಪ್ರಿಯವಾದವರು. ಶಾರುಖ್ ಖಾನ್, ಅಕ್ಷಯ್, ಸಲ್ಮಾನ್ ಹಲವು ಸ್ಟಾರ್ ನಟರ ಆಪ್ತರಾಗಿರುವ ಫರಾಹ್ ಖಾನ್, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಭೋಜನ ಪ್ರಿಯೆ ಫರಾಹ್ ಖಾನ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ತೆರೆದಿದ್ದು, ಅತಿಥಿಗಳನ್ನು ಆಹ್ವಾನಿಸಿ ಬಗೆ-ಬಗೆ ಭೋಜನಗಳನ್ನು ಅವರಿಗೆ ತಿನ್ನಿಸುತ್ತಾರೆ. ಅವರ ಪ್ರತಿ ವಿಡಿಯೋನಲ್ಲಿ ಅವರ ಅಡುಗೆಯವ ಅವರ ಜೊತೆಗೆ ಇರುತ್ತಾರೆ. ವಿಡಿಯೋಗಳಿಂದಾಗಿ ಫರಾಹ್ ಖಾನ್ ಅವರಷ್ಟೆ ಅವರ ಅಡುಗೆಯವರೂ ಜನಪ್ರಿಯರಾಗಿದ್ದಾರೆ.

ಫರಾಹ್ ಖಾನ್ ಅಡುಗೆಯವನ ಹೆಸರು ದಿಲೀಪ್, ಫರಾಹ್ ಖಾನ್ ಹಾಗೂ ದಿಲೀಪ್ ನಡುವೆ ಮಾಲೀಕ-ನೌಕರ ಸಂಬಂಧ ಇಲ್ಲ ಬದಲಿಗೆ ಅಕ್ಕ-ತಮ್ಮನ ಸಲುಗೆ ಇದೆ. ಹಾಗಾಗಿ ಇಬ್ಬರೂ ಸಹ ವಿಡಿಯೋಗಳಲ್ಲಿ ಪರಸ್ಪರರ ಮೇಲೆ ಜೋಕುಗಳನ್ನು ಮಾಡುತ್ತಾ, ಪರಸ್ಪರರ ಕಾಲೆಳೆಯುತ್ತಿರುತ್ತಾರೆ. ದಿಲೀಪ್ ಅಂತೂ, ಸಂಬಳ ಕೊಡುವ ಮಾಲಕಿ ಎಂದೂ ಸಹ ನೋಡದೆ ಫರಾಹ್ ಖಾನ್ ಕಾಲೆಳೆಯುತ್ತಾರೆ. ಅಂದಹಾಗೆ ಫರಾಹ್ ಖಾನ್ ತಮ್ಮ ಅಡುಗೆಯವ ದಿಲೀಪ್​​ಗೆ ಭರ್ಜರಿ ಸಂಬಳವನ್ನೇ ಕೊಡುತ್ತಾರೆ. ದೇಶದ ಹಲವು ಎಂಜಿನಿಯರ್​​ಗಳಿಗೂ ಬಾರದಷ್ಟು ತಿಂಗಳ ಸಂಬಳ ದಿಲೀಪ್​​ಗೆ ಸಿಗುತ್ತಿದೆ.

ಬಿಹಾರ ಮೂಲದ ದಿಲೀಪ್, ಮುಂಬೈಗೆ ಬಂದಾಗ ತಿಂಗಳಿಗೆ 300 ರೂಪಾಯಿ ಸಂಬಳವಂತೆ. ಫರಾಹ್ ಖಾನ್ ಬಳಿ ಕೆಲಸಕ್ಕೆ ಸೇರಿದಾಗ ತಿಂಗಳಿಗೆ 20 ಸಾವಿರ ರೂಪಾಯಿ ನೀಡುತ್ತಿದ್ದರಂತೆ ಫರಾಹ್ ಖಾನ್. ಆದರೆ ಈಗ ದಿಲೀಪ್ ಸಂಬಳ ಲಕ್ಷಗಳಲ್ಲಿದೆ. ಇತ್ತೀಚೆಗಷ್ಟೆ ಫರಾಹ್ ಖಾನ್, ದಿಲೀಪ್ ಸಂಬಳವನ್ನು ಏರಿಸಿದ್ದಾಗಿ ಹೇಳಿದ್ದರು. ಕೆಲ ಮೂಲಗಳ ಪ್ರಕಾರ, ದಿಲೀಪ್ ತಿಂಗಳಿಗೆ 1.50 ಲಕ್ಷ ರೂಪಾಯಿ ಸಂಬಳವಾಗಿ ಪಡೆಯುತ್ತಾರಂತೆ. ಜೊತೆಗೆ ಈಗ ಫರಾಹ್ ಖಾನ್ ಅವರ ಎಲ್ಲ ವಿಡಿಯೋಗಳಲ್ಲಿಯೂ ಬರುತ್ತಿರುವ ಕಾರಣ, ಫರಾಹ್ ಖಾನ್, ದಿಲೀಪ್​​ಗೆ ಯೂಟ್ಯೂಬ್ ರೆವೆನ್ಯೂನಲ್ಲಿ ಪಾಲು ಸಹ ನೀಡುತ್ತಿದ್ದಾರಂತೆ.

ಇದನ್ನೂ ಓದಿ:‘ಇಡೀ ಬಾಲಿವುಡ್ ಒಂದು ಕಡೆಯಾದರೆ, ಇಮ್ರಾನ್ ಹಶ್ಮಿ ಒಂದು ಕಡೆ’

ದಿಲೀಪ್ ಅದೆಷ್ಟು ಜನಪ್ರಿಯರಾಗಿದ್ದಾರೆ ಎಂದರೆ ಇತ್ತೀಚೆಗೆ ಅವರಿಗೆ ಜಾಹೀರಾತು ಅವಕಾಶಗಳು ಸಹ ಸಿಗುತ್ತಿವೆ. ಇತ್ತೀಚೆಗಷ್ಟೆ ಅವರು ಫ್ಲಿಪ್​​ಕಾರ್ಟ್ ಫೆಸ್ಟಿವಲ್ ಸೇಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದು ಮಾತ್ರವೇ ಅಲ್ಲದೆ ಅಡುಗೆ ಉತ್ಪನ್ನಗಳ ಜಾಹಿರಾತು ಇನ್ನೂ ಕೆಲ ಜಾಹೀರಾತುಗಳಲ್ಲಿಯೂ ಸಹ ದಿಲೀಪ್ ನಟಿಸಿದ್ದಾರೆ. ಇವುಗಳ ಜೊತೆಗೆ ಇತ್ತೀಚೆಗಷ್ಟೆ ದಿಲೀಪ್ ತಮ್ಮದೇ ಆದ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಒಂದನ್ನು ಸಹ ತೆರೆದಿದ್ದಾರೆ. ಅದರಿಂದಲೂ ಸಾಕಷ್ಟು ರೆವೆನ್ಯೂ ಅನ್ನು ಅವರು ಪಡೆಯುತ್ತಿದ್ದಾರೆ.

ಕೆಲ ವಾರಗಳ ಹಿಂದೆ ಫರಾಹ್ ಖಾನ್ ಅವರಿಂದ ರಜೆ ಪಡೆದು ತಮ್ಮ ಊರು ಬಿಹಾರಕ್ಕೆ ದಿಲೀಪ್ ಹೋಗಿದ್ದರು. ದಿಲೀಪ್ ಅನ್ನು ತಮ್ಮದೇ ಖಾಸಗಿ ಕಾರಿನಲ್ಲಿ ಫರಾಹ್ ಖಾನ್ ಕಳಿಸಿಕೊಟ್ಟಿದ್ದರು. ಊರಿನಲ್ಲಿ ವ್ಲಾಗ್ ಮಾಡಿದ್ದ ದಿಲೀಪ್, ತಮ್ಮ ಊರಿನಲ್ಲಿ ನಾಲ್ಕು ಅಂತಸ್ಥಿನ ಮನೆ ಕಟ್ಟುತ್ತಿರುವುದಾಗಿ ಹೇಳಿದ್ದರಲ್ಲದೆ, ನಿರ್ಮಾಣವಾಗುತ್ತಿರುವ ತಮ್ಮ ಐಶಾರಾಮಿ ಮನೆಯ ವಿಡಿಯೋ ತೋರಿಸಿದ್ದರು. ಯೂಟ್ಯೂಬ್ ಒಂದರಲ್ಲಿ ಫರಾಹ್ ಖಾನ್ ಸಹ ದಿಲೀಪ್ ಸಂಬಳದ ಬಗ್ಗೆ ಮಾತನಾಡಿ, ನನ್ನ ಬಳಿ 20 ಸಾವಿರಕ್ಕೆ ಕೆಲಸಕ್ಕೆ ಸೇರಿದ, ಈಗ ಆತ ಎಷ್ಟು ಗಳಿಸುತ್ತಿದ್ದಾನೆಂದು ಹೇಳಲು ಸಹ ಸಾಧ್ಯವಿಲ್ಲ ಎಂದಿದ್ದರು. ಮಾತ್ರವಲ್ಲದೆ, ಶ್ರುತಿ ಹಾಸನ್ ಜೊತೆಗಿನ ವಿಡಿಯೋನಲ್ಲಿ, ‘ದಿಲೀಪ್​​ನಷ್ಟು ಸಂಪಾದನೆಯನ್ನು ಈ ವಿಡಿಯೋನಲ್ಲಿರುವ ಯಾರೂ ಸಹ ಮಾಡುತ್ತಿಲ್ಲ’ ಎಂದಿದ್ದರು ಫರಾಹ್ ಖಾನ್.

ದಿಲೀಪ್, ಫರಾಹ್ ಖಾನ್ ಬಳಿ 12 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ದಿಲೀಪ್ ಹಾಗೂ ಫರಾಹ್ ಖಾನ್ ನಡುವೆ ಅಪರೂಪದ ಆತ್ಮೀಯತೆ ಬೆಳೆದಿದೆ. ಫರಾಹ್ ಖಾನ್ ಸಹ ಎಲ್ಲಿಗೇ ಹೋದರು ದಿಲೀಪ್ ಅವರನ್ನು ಕರೆದುಕೊಂಡೇ ಹೋಗುತ್ತಾರೆ. ದಿಲೀಪ್, ತಮ್ಮ ಮುಗ್ಧ ಮಾತು, ಸ್ವಚ್ಛ ನಗುವಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮಿಂಚುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Sun, 21 September 25