ಶಾರುಖ್ಗೆ ಕೈಕೊಟ್ಟಿದ್ದ ಕಮಲ್ ಹಾಸನ್, ಕಿಂಗ್ ಖಾನ್ಗೆ ಆಗಿತ್ತು ಬೇಸರ
Kamal Haasan-Shah Rukh Khan: ಕಮಲ್ ಹಾಸನ್ ಹಾಗೂ ಶಾರುಖ್ ಖಾನ್ ಆಪ್ತ ಗೆಳೆಯರು. ಕಮಲ್ ಹಾಸನ್ ನಿರ್ದೇಶಿಸಿದ್ದ ‘ಹೇ ರಾಮ್’ ಸಿನಿಮಾನಲ್ಲಿ ಶಾರುಖ್ ಖಾನ್ ಸಂಭಾವನೆ ಪಡೆಯದೆ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಒಮ್ಮೆ ಕಮಲ್ ಹಾಸನ್ ಅವರಿಂದ ಬೇಸರ ಅನುಭವಿಸಿದ್ದರಂತೆ ಶಾರುಖ್ ಖಾನ್, ಏನದು ಸಂಗತಿ?

ಸಿನಿಮಾ ರಂಗದಲ್ಲಿ ಕೊಟ್ಟು-ತೆಗೆದುಕೊಳ್ಳುವ ಪದ್ಧತಿ ಮೊದಲಿನಿಂದಲೂ ಇದೆ. ದೊಡ್ಡ ನಟರು ಮತ್ತೊಬ್ಬರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಆ ನಂತರ ಈ ನಟರು ಮತ್ತೊಬ್ಬ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದು. ಪರಸ್ಪರರ ಸಿನಿಮಾಗಳಿಗೆ ಸಹಾಯ ಮಾಡುವುದು ನಡೆಯುತ್ತಲೇ ಬಂದಿದೆ. ಶಾರುಖ್ ಖಾನ್ (Shah Rukh Khan) ಸಹ ತಮ್ಮ ಆಪ್ತರ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟರಾಗಿದ್ದ ಶಾರುಖ್ ಖಾನ್, ಕಮಲ್ ಹಾಸನ್ ಅವರ ಮೇಲಿನ ಪ್ರೀತಿಯಿಂದ ಅವರ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಆ ಬಳಿಕ ಕಮಲ್ ಹಾಸನ್, ಶಾರುಖ್ ಖಾನ್ಗೆ ಕೈಕೊಟ್ಟರಂತೆ. ಈ ಬಗ್ಗೆ ಶಾರುಖ್ ಖಾನ್ರ ಆಪ್ತೆ, ನಿರ್ದೇಶಕ ಫರಾಹ್ ಖಾನ್ ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್ ಮೊದಲ ನಿರ್ಮಾಣದ ಸಿನಿಮಾ ‘ಮೈ ಹೂ ನಾ’ ಭಾರಿ ದೊಡ್ಡ ಹಿಟ್ ಆದ ಸಿನಿಮಾ. ಸಿನಿಮಾ ನಿರ್ದೇಶನ ಮಾಡಿದ್ದು ಫರಾಹ್ ಖಾನ್. ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಕಮಲ್ ಹಾಸನ್ ಅವರನ್ನು ಕೇಳಲಾಗಿತ್ತಂತೆ. ‘ಮೈ ಹೂ ನಾ’ ಸಿನಿಮಾನಲ್ಲಿ ಖ್ಯಾತ ನಟ ಸುನಿಲ್ ಶೆಟ್ಟಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ನಾಯಕ ನಟನಷ್ಟೆ ವಿಲನ್ ಪಾತ್ರಕ್ಕೂ ಪ್ರಾಧಾನ್ಯತೆ ಈ ಸಿನಿಮಾನಲ್ಲಿತ್ತು. ಹಾಗಾಗಿ ಪ್ರಮುಖ ನಟರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲು ಶಾರುಖ್ ಖಾನ್ ಮತ್ತು ಫರಾಹ್ ಖಾನ್ ಬಯಸಿದ್ದರು.
ಸುನಿಲ್ ಶೆಟ್ಟಿ ಪಾತ್ರಕ್ಕೆ ಮೊದಲು ಕೇಳಿದ್ದು ಕಮಲ್ ಹಾಸನ್ ಅವರನ್ನಂತೆ. ಶಾರುಖ್ ಖಾನ್ ಹೇಳಿದ್ದರಂತೆ. ಕಮಲ್ ಅವರಿಗೆ ನಾನೆಂದರೆ ಬಹಳ ಪ್ರೀತಿ, ನಾನು ಅವರ ‘ಹೇ ರಾಮ್’ ಸಿನಿಮಾನಲ್ಲಿ ನಟಿಸಿದ್ದೇನೆ, ಖಂಡಿತ ಅವರು ಬೇಡ ಎನ್ನುವದಿಲ್ಲ ಎಂದಿದ್ದರಂತೆ. ಅದರಂತೆ ಫರಾಹ್ ಖಾನ್ ಹೋಗಿ ಚೆನ್ನೈನಲ್ಲಿ ಕಮಲ್ ಹಾಸನ್ಗೆ ಕತೆ ಹೇಳಿದರಂತೆ. ಫರಾಹ್ ಹೇಳಿಕೊಂಡಿರುವಂತೆ, ಕಮಲ್ ಹಾಸನ್ ಒಂದು ದಿನವೆಲ್ಲ ಅವರನ್ನು ಸತಾಯಿಸಿ, ಏನೇನೋ ಅನುಮಾನಗಳನ್ನು ಕೇಳಿ ಕೊನೆಗೆ ಆಗುವುದಿಲ್ಲ’ ಎಂದರಂತೆ. ಇದು ಶಾರುಖ್ ಖಾನ್ಗೆ ಬಹಳ ಬೇಸರ ತರಿಸಿತಂತೆ.
ಇದನ್ನೂ ಓದಿ:ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್ಗೆ ಕೊಲೆ ಬೆದರಿಕೆ
ಇನ್ನು ಅದೇ ಪಾತ್ರಕ್ಕೆ ನಾನಾ ಪಟೇಕರ್ ಅವರನ್ನು ಕೇಳಲಾಯ್ತಂತೆ. ಆದರೆ ನಾನಾ ಪಟೇಕರ್ ಆಗ ಬ್ಯುಸಿಯಾಗಿದ್ದರಂತೆ. ಆದರೆ ಫರಾಹ್ ಖಾನ್ಗೆ ಆ ಪಾತ್ರದ ಬಗ್ಗೆ ಕೆಲವು ಒಳ್ಳೆಯ ಸಲಹೆ, ಸೂಚನೆಗಳನ್ನು ನೀಡಿದರಂತೆ. ಬಳಿಕ ನಾಸಿರುದ್ಧೀನ್ ಶಾ ಅವರನ್ನೂ ಕೇಳಲಾಯ್ತಂತೆ. ಆದರೆ ಅವರು ಸಹ ಒಪ್ಪಲಿಲ್ಲ, ಆದರೆ ಅದೇ ಸಿನಿಮಾದಲ್ಲಿ ಮತ್ತೊಂದು ಸಣ್ಣ ಪಾತ್ರದಲ್ಲಿ ನಟಿಸಿದರು. ಅಂತಿಮವಾಗಿ ಪಾತ್ರದಲ್ಲಿ ನಟಿಸಲು ಸುನಿಲ್ ಶೆಟ್ಟಿ ಒಪ್ಪಿಕೊಂಡರು. ಸಿನಿಮಾ ದೊಡ್ಡ ಹಿಟ್ ಆಯ್ತು.
ಅಂದಹಾಗೆ ಶಾರುಖ್ ಖಾನ್, ಕಮಲ್ ಹಾಸನ್ ನಿರ್ದೇಶಿಸಿ ನಟಿಸಿದ್ದ ‘ಹೇ ರಾಮ್’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ನಟಿಸಲು ಯಾವುದೇ ಸಂಭಾವನೆಯನ್ನು ಶಾರುಖ್ ಖಾನ್ ಪಡೆದಿರಲಿಲ್ಲ. ನನಗೆ ಕಮಲ್ ಎಂದರೆ ಪ್ರೀತಿ, ಅವರೊಂದಿಗೆ ಇರಲು ಮಾತ್ರವೇ ನಾನು ಈ ಸಿನಿಮಾನಲ್ಲಿ ನಟಿಸುತ್ತಿದ್ದೇನೆ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




