ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ ಕುಂದ್ರಾ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆ ಜಾರಿಯಲ್ಲಿದೆ.
ಕೆಲವು ದಿನಗಳ ಹಿಂದೆಯಷ್ಟೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಭಾರಿ ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದರು. ಗೆಳೆಯರನ್ನು ಕರೆಸಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ದಂಪತಿಗಳಿಬ್ಬರೂ ಟಾಂಗಾದಲ್ಲಿ ನಗರ ಸುತ್ತಾಡಿ ಎಂಜಾಯ್ ಮಾಡಿದ್ದರು. ಆದರೆ ಅದರ ಬೆನ್ನಲ್ಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಹಿಂದೆಯೂ ಒಮ್ಮೆ ರಾಜ್ ಕುಂದ್ರಾ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಇಡಿ ಇಲಾಖೆ ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ ಜುಹುವಿನ ಐಶಾರಾಮಿ ಮನೆ, ಪುಣೆಯ ಮನೆ ಹಾಗೂ ಕೆಲವು ಈಕ್ವಿಟಿ ಷೇರುಗಳು ಸಹ ಇದ್ದವು. 6600 ಕೋಟಿ ಮೌಲ್ಯದ ಬಿಟ್ಕಾಯ್ನ್ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ರಾಜ್ ಕುಂದ್ರಾ ಮೇಲೆ ದಾಳಿ ಮಾಡಲಾಗಿತ್ತು.
ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ರಾಜ್ ಕುಂದ್ರಾ ಮೇಲೆ ದಾಳಿ ಆಗಿರುವ ಸಾಧ್ಯತೆ ಇದೆ. 2017 ರಲ್ಲಿ ರಾಜ್ ಕುಂದ್ರಾ ಮತ್ತು ಅವರ ಕೆಲವು ಆಪ್ತರು ಭಾರಿ ಮೊತ್ತದ ಹಣವನ್ನು ಬಿಟ್ಕಾಯ್ನ್ ಮೇಲೆ ಹೂಡಿಕೆ ಮಾಡಿ 6600 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು. ಜೊತೆಗೆ ಜನರಿಗೆ ಶೇ 10 ಹಣ ಪಾವತಿಸುವುದಾಗಿ ಹೇಳಿ ಬಂಡವಾಳವನ್ನು ಸಹ ಆಕರ್ಷಿಸಿದ್ದರು. 2018 ರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಈ ಬಗ್ಗೆ ಸಮನ್ಸ್ ನೀಡಿ ವಿಚಾರಣೆ ಸಹ ಮಾಡಲಾಗಿತ್ತು.
ಇನ್ನು 2021 ರಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಅನ್ನು ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣದಲ್ಲಿ ಬಂಧಿಸಿದ್ದರು. ಅಶ್ಲೀಲ ಸಿನಿಮಾಗಳನ್ನು ಮುಂಬೈನಲ್ಲಿ ನಿರ್ಮಿಸಿ ಅದನ್ನು ಲಂಡನ್ ಮೂಲದ ತಮ್ಮದೇ ಕಂಪೆನಿಯ ಸರ್ವರ್ನಿಂದ ಅಪ್ಲಿಕೇಶನ್ಗೆ ಅಪ್ಲೋಡ್ ಮಾಡಿಸುತ್ತಿದ್ದರಂತೆ ರಾಜ್ ಕುಂದ್ರಾ. ಇದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿ ಹಣವನ್ನು ಕುಂದ್ರಾ ಗಳಿಸುತ್ತಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Fri, 29 November 24