ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಾಕಷ್ಟು ಕಷ್ಟಗಳನ್ನು ಮೀರಿ ಈ ಚಿತ್ರ ರಿಲೀಸ್ ಏನೋ ಆಯಿತು. ಆದರೆ, ಸಿನಿಮಾ ಅಂದುಕೊಂಡ ರೀತಿಯ ಕಲೆಕ್ಷನ್ ಮಾಡುತ್ತಿಲ್ಲ. ಈ ವಿಚಾರ ಕಂಗನಾಗೆ ಬೇಸರ ಮೂಡಿಸಿದೆ. ಹೀಗೆ ಮುಂದುವರಿದರೆ ಸಿನಿಮಾ ಲಾಭ ಕಾಣೋದು ಕಷ್ಟ ಆಗಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆ ಎಂದು ಕಂಗನಾ ಅಂದುಕೊಂಡಿದ್ದರು. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರ ಸಾಕಷ್ಟು ವಿವಾದಗಳನ್ನೇನೋ ಮಾಡಿತು. ಆದರೆ, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ಸಿನಿಮಾ ವಿಫಲವಾಗಿದೆ.
‘ಎಮರ್ಜೆನ್ಸಿ’ ಸಿನಿಮಾ ಮೊದಲ ದಿನ ಎರಡೂವರೆ ಕೋಟಿ ರೂಪಾಯಿ, ಎರಡನೇ ದಿನ ಮೂರುವರೆ ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 4.35 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 10 ಕೋಟಿ ರೂಪಾಯಿಗೆ ಸೀಮಿತವಾಗಿದೆ. ಕಂಗನಾ ಇಟ್ಟುಕೊಂಡ ನಿರೀಕ್ಷೆಗೂ ಗಳಿಕೆಯ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಸಿನಿಮಾ ತೆವಳಿಕೊಂಡು ಸಾಗುತ್ತಿದೆ.
ಇದನ್ನೂ ಓದಿ: ಹೀನಾಯ ಸ್ಥಿತಿಯಲ್ಲಿದೆ ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ಗಳಿಕೆ; ಎರಡು ದಿನದ ಕಲೆಕ್ಷನ್ ಎಷ್ಟು?
ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾಗೆ 25 ಕೋಟಿ ರೂಪಾಯಿಗೂ ಹೆಚ್ಚಿನ ಬಜೆಟ್ ಹಾಕಿದ್ದಾರೆ. ಈ ಸಿನಿಮಾ ಲಾಭ ಕಾಣಬೇಕು ಎಂದರೆ ಸಿನಿಮಾ 50 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಮಾಡಬೇಕಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಇದು ಕಂಗನಾ ಅವರನ್ನು ಮತ್ತಷ್ಟು ಚಿಂತೆಗೆ ಒಳ ಮಾಡಿದೆ.
ಕಂಗನಾ ಜೊತೆ ಅನುಪಮ್ ಖೇರ್ ಮೊದಲಾದವರು ನಟಿಸಿದ್ದಾರೆ. ಸಿನಿಮಾದ ಟಿವಿ ಹಕ್ಕು, ಒಟಿಟಿ ಹಕ್ಕು ಸೇರಿದರೆ ಅಲ್ಲಿಂದ ಅಲ್ಲಿಗೆ ಬಿಸ್ನೆಸ್ ಮಾಡಿದಂತೆ ಆಗಲಿದೆ. ಕಂಗನಾ ಅವರು ಈ ಚಿತ್ರದಲ್ಲಿ ಇಂದಿರಾ ಗಾಂಧಿ ಅವರ ಪಾತ್ರ ಮಾಡಿದ್ದಾರೆ. ಅವರದ್ದೇ ನಿರ್ದೇಶನ ಕೂಡ ಚಿತ್ರಕ್ಕೆ ಇದೆ. ಜೀ ಸ್ಟುಡಿಯೋ ಜೊತೆ ಸೇರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರು ಈ ರೀತಿಯ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.