
ಇಮ್ರಾನ್ ಹಶ್ಮಿ (Emraan Hashmi) ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಬಾಲಿವುಡ್ನಲ್ಲಿದ್ದಾರೆ. ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಹ ಇಮ್ರಾನ್ ಹಶ್ಮಿ ಸ್ಟಾರ್ ಎನಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಇಮ್ರಾನ್ ಹಶ್ಮಿ ಅವರಿಗೆ ಒಂದು ಕಲ್ಟ್ ಫಾಲೋವಿಂಗ್ ಹುಟ್ಟಿಕೊಂಡಿತ್ತು. ಇತ್ತೀಚೆಗಷ್ಟೆ ಇಮ್ರಾನ್ ಹಶ್ಮಿ ನಟಿಸಿರುವ ‘ಆವಾರಾಪನ್ 2’ ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಎನಿಸಿಕೊಂಡಿತು. ಎರಡು ದಶಕದಲ್ಲಿ ಇಮ್ರಾನ್ ಅವರ ಬಹು ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿತು ‘ಆವಾರಾಪನ್ 2’. ಆದರೆ ಆ ಖುಷಿಯನ್ನು ಅನುಭವಿಸುವ ಸಮಯದಲ್ಲಿಯೇ ಇಮ್ರಾನ್ ಹಶ್ಮಿಗೆ ಹಂದಿ ಜ್ವರ ಬಂದಿದೆ!
ಇಮ್ರಾನ್ ಹಶ್ಮಿ ಅವರಿಗೆ ಸ್ವಾನ್ ಫ್ಲೂ (H1N1) ಅಥವಾ ಹಂದಿ ಜ್ವರದ ಸೋಂಕಿರುವುದು ದೃಢಪಟ್ಟಿದೆ. ಮುಂಬೈನಲ್ಲಿ ಅವರಿಗೆ ಈ ಸೋಂಕು ತಗುಲಿರುವುದು ತಿಳಿದುಬಂದಿದೆ. ವೈದ್ಯಕೀಯ ವರದಿಯ ಸಾಕ್ಷಿಯೊಂದಿಗೆ ಅವರ ಪ್ರತಿನಿಧಿಯೂ ಇದನ್ನು ಖಚಿತಪಡಿಸಿದ್ದಾರೆ. ಇತ್ತೀಚೆಗೆ ದೆಹಲಿ, ಮುಂಬೈ ನಗರಗಳಲ್ಲಿ H1N1 (ಸ್ವಾನ್ ಫ್ಲೂ) ಸೋಂಕುಗಳು ತೀವ್ರವಾಗಿ ಹೆಚ್ಚಾಗಿವೆ. ರಾಜಧಾನಿಯಲ್ಲಿ ಈವರೆಗೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೆ ಅವರು ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದರಂತೆ. ಅಲ್ಲಿಂದ ಬಂದ ಬಳಿಕ ಅವರಿಗೆ ಅನಾರೋಗ್ಯ ಕಾಡಲು ಶುರುವಾಗಿದೆ. ವೈದ್ಯರ ಸಲಹೆಯಂತೆ ಪರೀಕ್ಷೆಗೆ ಒಳಪಟ್ಟಾಗ ಅವರಿಗೆ ಹಂದಿ ಜ್ವರ ಇರುವುದು ಖಾತ್ರಿ ಆಗಿದೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್
ಇಮ್ರಾನ್ ಹಶ್ಮಿ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಇವೆಂಟ್ ಒಂದರಲ್ಲಿ ಭಾಗವಹಿಸಬೇಕಿತ್ತು. ಅದಕ್ಕಾಗಿ ಟಿಕೆಟ್ಗಳ ಮಾರಾಟವನ್ನು ಸಹ ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಹಂದಿ ಜ್ವರ ಖಾತ್ರಿ ಆಗಿರುವ ಕಾರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಇಮ್ರಾನ್ ಹಶ್ಮಿ, ‘ಶೋ ಮುಗಿದಿಲ್ಲ ಬದಲಿಗೆ ಮುಂದೂಡಲ್ಪಟ್ಟಿದೆ ಅಷ್ಟೆ’ ಎಂದಿದ್ದಾರೆ. ಈಗಾಗಲೇ ಟಿಕೆಟ್ ಖರೀದಿ ಮಾಡಿರುವವರ ಟಿಕೆಟ್ಗಳು ಮಾನ್ಯವಾಗಿರುತ್ತವೆ. ಸೆಪ್ಟೆಂಬರ್ 12 ರಂದು ಕಾರ್ಯಕ್ರಮ ನಡೆಯಲಿದೆ’ ಎಂದಿದ್ದಾರೆ ಇಮ್ರಾನ್ ಹಶ್ಮಿ.
ಇಮ್ರಾನ್ ಹಶ್ಮಿ ನಟಿಸಿರುವ ‘ಆವಾರಾಪನ್ 2’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಸಿನಿಮಾ 200 ಕೋಟಿ ಗಳಿಕೆ ದಾಟಿ ಮುನ್ನುಗ್ಗುತ್ತಿದೆ. ಇದು ಇಮ್ರಾನ್ ಹಶ್ಮಿ ಅವರ ವೃತ್ತಿ ಜೀವನದ ಈ ವರೆಗಿನ ಅತಿ ದೊಡ್ಡ ಸಿನಿಮಾ ಆಗಿ ಹೊರಹೊಮ್ಮಿದೆ. ಈ ಸಿನಿಮಾದಿಂದಾಗಿ ಇಮ್ರಾನ್ ಹಶ್ಮಿಗೆ ಅಚಾನಕ್ಕಾಗಿ ಮತ್ತೆ ಬೇಡಿಕೆ, ಜನಪ್ರಿಯತೆ ಗುದುರಿದೆ.
H1N1 ಯಾವುದೇ ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣಿಸಿಕೊಳ್ಳುತ್ತದೆ. ಹಠಾತ್ ಜ್ವರ, ಮೈಕೈ ನೋವು, ಗಂಟಲು ನೋವು, ಕೆಮ್ಮು, ಮೂಗು ಸೋರುವಿಕೆ ಮತ್ತು ಸುಸ್ತು ಕಾಣಿಸಿಕೊಳ್ಳುತ್ತದೆ. H1N1 ಅಥವಾ ಹಂದಿ ಜ್ವರದಲ್ಲಿ ಜ್ವರವು ಅಧಿಕವಾಗಿರುತ್ತದೆ, ಉಸಿರಾಟದ ತೊಂದರೆ ಅಥವಾ ಎದೆ ನೋವು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಜ್ವರ ಬೇಗನೆ ತಗ್ಗುವುದಿಲ್ಲ. ಈ ಸೋಂಕಿನಲ್ಲಿ ಉಸಿರಾಟದ ತೊಂದರೆ, ನಿರಂತರ ಎದೆ ನೋವು ಅಥವಾ ಬಿಗಿತ, ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು, ನಾಲ್ಕೈದು ದಿನಗಳಿಗೂ ಹೆಚ್ಚು ಕಾಲ ಕೆಮ್ಮು ಉಲ್ಬಣಗೊಳ್ಳುವುದು, ತಂಪಾದ ಅನುಭವ, ಮಕ್ಕಳಲ್ಲಿ ಮೂತ್ರ ವಿಸರ್ಜನೆ ಕಡಿಮೆಯಾಗುವುದು ಕಂಡುಬರುತ್ತದೆ. ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ