‘ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು’: ಬಹಿರಂಗವಾಗಿ ಹೇಳಿದ ವಿವೇಕ್​ ಅಗ್ನಿಹೋತ್ರಿ

|

Updated on: Aug 10, 2023 | 3:44 PM

Vivek Agnihotri: ‘ಒಎಂಜಿ 2’ ಸಿನಿಮಾಗೆ ಸೆನ್ಸಾರ್​ ಮಂಡಳಿಯವರು ಅನೇಕ ಬದಲಾವಣೆಗಳನ್ನು ಮಾಡುವಂತೆ ಆದೇಶಿದ ಬಳಿಕ ‘ಎ’ ಪ್ರಮಾಣಪತ್ರ ನೀಡಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಅವರು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದರೂ ಕೂಡ ಈ ರೀತಿಯ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣ ಆಗಿದೆ.

‘ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು’: ಬಹಿರಂಗವಾಗಿ ಹೇಳಿದ ವಿವೇಕ್​ ಅಗ್ನಿಹೋತ್ರಿ
ವಿವೇಕ್​ ಅಗ್ನಿಹೋತ್ರಿ
Follow us on

ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರನ್ನು ಅನೇಕ ವಿವಾದಗಳು ಸುತ್ತಿಕೊಂಡಿವೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ ಬಳಿಕ ವಿವೇಕ್​ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆದರು. ಸಿನಿಮಾ ಮಾತ್ರವಲ್ಲದೇ ಬೇರೆ ಬೇರೆ ವಿಚಾರಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವರು ಆರಂಭಿಸಿದರು. ಬಲಪಂಥೀಯ ವಿಚಾರಗಳ ಪರವಾಗಿ ವಿವೇಕ್​ ಅಗ್ನಿಹೋತ್ರಿ ಆಗಾಗ ಮಾತನಾಡುತ್ತಾರೆ. ಈ ನಡುವೆ ಅವರೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸೆನ್ಸಾರ್​ ಮಂಡಳಿಯ (Censor Board) ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ದ್ವೇಷದ ಭಾಷಣಕ್ಕೂ (Hate Speech) ಅವಕಾಶ ನೀಡಬೇಕು ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಅಕ್ಷಯ್​ ಕುಮಾರ್​ ನಟನೆಯ ‘ಒಎಂಜಿ 2’ ಸಿನಿಮಾಗೆ ಸೆನ್ಸಾರ್​ ಮಂಡಳಿಯವರು ಅನೇಕ ಬದಲಾವಣೆಗಳನ್ನು ಮಾಡುವಂತೆ ಆದೇಶಿದ ಬಳಿಕ ‘ಎ’ ಪ್ರಮಾಣಪತ್ರ ನೀಡಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಅವರು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದಾರೆ. ಹಾಗಿದ್ದರೂ ಕೂಡ ಅವರು ಈ ರೀತಿಯ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣ ಆಗಿದೆ. ‘ಇಂಡಿಯಾ.ಕಾಮ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ಇದನ್ನೂ ಓದಿ: Vivek Agnihotri: ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಬಜೆಟ್​ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್​ ಅಗ್ನಿಹೋತ್ರಿ

‘ನಾನು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದರೂ ಕೂಡ ಅದನ್ನು ವಿರೋಧಿಸುತ್ತೇನೆ. ಯಾವುದೇ ಸೆನ್ಸಾರ್​ ಮಂಡಳಿ ಇರಬಾರದು. ಸಿನಿಮಾಗಳನ್ನು ಬಹಿಷ್ಕರಿಸುವ ಮತ್ತು ಬ್ಯಾನ್​ ಮಾಡುವುದರ ಬಗ್ಗೆಯೂ ನನ್ನ ವಿರೋಧವಿದೆ. ಮುಕ್ತ ಮಾತಿನ ಬಗ್ಗೆ ನನಗೆ ನಂಬಿಕೆ ಇದೆ. ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು. ಸಿನಿಮಾ ಮಾಡುವವರ ಉದ್ದೇಶ ಏನು? ಉದ್ದೇಶ ಕೆಟ್ಟದ್ದಾಗಿ ಇಲ್ಲ ಎಂದರೆ ಮುಂದುವರಿಯಲಿ ಬಿಡಿ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ: Jawan: ‘ತಾಕತ್ತಿದ್ದರೆ ಜವಾನ್​ ಎದುರು ನಿಮ್ಮ ಸಿನಿಮಾ ರಿಲೀಸ್​ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೇರ ಸವಾಲು

ಸದ್ಯ ವಿವೇಕ್​ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಹಬ್ಬದ ವೇಳೆ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ. ಇನ್ನು, ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸರಣಿಗೂ ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಇದರ ಟ್ರೇಲರ್​ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಜೀ5 ಒಟಿಟಿ ಮೂಲಕ ಇದು ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.