ಸಲ್ಮಾನ್ ಖಾನ್ ಆ ಸಿನಿಮಾವನ್ನು ಹಾಳು ಮಾಡಿದ: ನಿರ್ದೇಶಕ ಪ್ರವೀಣ್
Salman Khan: ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾವನ್ನು ಹಾಳು ಮಾಡಿದರು ಎಂದು ಮರಾಠಿ ನಿರ್ದೇಶಕ ಆರೋಪ ಮಾಡಿದ್ದಾರೆ.
ಒಂದು ಭಾಷೆಯಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಇನ್ನೊಂದು ಭಾಷೆಗೆ ರೀಮೇಕ್ ಆದಾಗ ಧಾರುಣ ಸೋಲು ಕಂಡ ಉದಾಹರಣೆ ಸಾಕಷ್ಟಿದೆ. ಅದರಲ್ಲಿಯೂ ಒಂದು ಭಾಷೆಯಲ್ಲಿ ಸಣ್ಣ ಬಜೆಟ್ನಲ್ಲಿ ಹೊಸಬರು ಮಾಡಿದ ಸಿನಿಮಾ ಸೂಪರ್ ಹಿಟ್ ಆಗಿ ಆ ಸಿನಿಮಾವನ್ನು ಪರಭಾಷೆಯಲ್ಲಿ ಸೂಪರ್ ಸ್ಟಾರ್ ಒಬ್ಬ ಕೈಗೆತ್ತಿಕೊಂಡು ಆ ಸಿನಿಮಾ ಅಟ್ಟರ್ ಫ್ಲಾಪ್ ಆಗಿದ್ದು ಮಾತ್ರವಲ್ಲದೆ ಮೂಲ ಸಿನಿಮಾದ ಫ್ಲೇವರ್ ಅನ್ನೇ ಹಾಳು ಮಾಡಿದ ಹಲವು ಉದಾಹರಣೆಗಳಿವೆ. ಅದರಲ್ಲಿ ಸಲ್ಮಾನ್ ಖಾನ್ (Salman Khan) ನಟನೆಯ ‘ಅಂತಿಮ್‘ ಸಿನಿಮಾ ಸಹ ಒಂದು.
2021 ರಲ್ಲಿ ಸಲ್ಮಾನ್ ಖಾನ್ ನಟನೆಯ ‘ಅಂತಿಮ್‘ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಇನ್ಸ್ಪೆಕ್ಟರ್ ರಾಜ್ವೀರ್ ಸಿಂಗ್ ನಟಿಸಿದ್ದರು. ಸಿನಿಮಾದಲ್ಲಿ ಅವರೇ ನಾಯಕ, ವಿಲನ್ ಪಾತ್ರದಲ್ಲಿ ಅವರ ತಂಗಿಯ ಪತಿ, ನಟ ಆಯುಷ್ ಶರ್ಮಾ ನಟಿಸಿದ್ದರು. ‘ಅಂತಿಮ್‘ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು. ‘ಅಂತಿಮ್‘ ಸಿನಿಮಾ ಮರಾಠಿ ಭಾಷೆಯ ‘ಮುಲ್ಷಿ ಪಟ್ಟೇರನ್‘ ಸಿನಿಮಾದ ರೀಮೇಕ್ ಆಗಿದ್ದು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಮಾತ್ರವೇ ಅಲ್ಲದೆ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಆದರೆ ಹಿಂದಿಯಲ್ಲಿ ಈ ಸಿನಿಮಾ ಇನ್ನಿಲ್ಲದಂತೆ ಸೋತಿತು.
ಮೂಲ ಸಿನಿಮಾ ‘ಮುಲ್ಷಿ ಪಟ್ಟೇರನ್‘ನ ನಿರ್ದೇಶಕ ಪ್ರವೀಣ್ ತಾಂಡೆ, ಸಂದರ್ಶನವೊಂದರಲ್ಲಿ ಮಾತನಾಡಿ, ”ಮುಲ್ಷಿ ಪಟೇರನ್‘ ಸಿನಿಮಾ ನೋಡಿದಾಗ ಅದ್ಭುತವಾದ ಸಿನಿಮಾ ಅದ್ಭುತವಾದ ಸಿನಿಮಾ ಎಂದಿದ್ದರು. ಆದರೆ ಅವರೇ ಸಿನಿಮಾ ಮಾಡಿದಾಗ ಬಹಳ ಕೆಟ್ಟದಾಗಿ ಸಿನಿಮಾ ಮಾಡಿದರು, ಮೂಲ ಸಿನಿಮಾವನ್ನು ಹಾಳು ಮಾಡಿದರು” ಎಂದಿದ್ದಾರೆ.
ಇದನ್ನೂ ಓದಿ:ಆ್ಯಕ್ಷನ್ ಚಿತ್ರಕ್ಕೆ ಸಹಿ ಹಾಕಿದ ಸಲ್ಮಾನ್ ಖಾನ್; ಕರಣ್ ಜೋಹರ್ ನಿರ್ಮಾಣದ ಈ ಚಿತ್ರಕ್ಕೆ 8 ತಿಂಗಳು ಶೂಟಿಂಗ್
ಮುಂದುವರೆದು, ”ನಾನು ಈವರೆಗೆ ‘ಅಂತಿಮ್‘ ಸಿನಿಮಾವನ್ನು ನೋಡಿಯೇ ಇಲ್ಲ. ಮಹೇಶ್ ಅವರು ಆ ಸಿನಿಮಾವನ್ನು ನಿರ್ದೇಶನ ಮಾಡಿದರು. ನನಗೂ ಆ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ ಮಾತ್ರವಲ್ಲ ಆ ಸಿನಿಮಾವನ್ನು ಈ ವರೆಗೆ ನೋಡಿಲ್ಲ, ಮುಂದೆಯೂ ನೋಡುವುದಿಲ್ಲ, ನನ್ನ ಪಾಲಿಗೆ ಇರುವುದು ಒಂದೇ ‘ಮುಲ್ಷಿ ಪಟೇರನ್‘. ಆದರೆ ನಾನು ನಂಬುವ ಕೆಲವು ಗೆಳೆಯರಿಂದ ‘ಅಂತಿಮ್‘ ಸಿನಿಮಾ ಎಷ್ಟು ಕೆಟ್ಟದಾಗಿದೆ ಎಂಬುದು ಗೊತ್ತಾಯಿತು” ಎಂದಿದ್ದಾರೆ.
‘ಮುಲ್ಷಿ ಪಟೇರನ್‘ ಹಾಗೂ ‘ಅಂತಿಮ್‘ ಎರಡೂ ಸಿನಿಮಾಗಳಲ್ಲಿ ನಟಿಸಿರುವ ಉಪೇಂದ್ರ ಲೆಮಿಯಾ ಸಹ ನಿರ್ದೇಶಕ ಪ್ರವೀಣ್ ತಾಂಡೆ ಮಾತಿಗೆ ಸಮ್ಮತಿ ಸೂಚಿಸಿದ್ದು, ನಾನು ಎರಡೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ, ಪ್ರವೀಣ್ ತಾಂಡೆ ಸಿನಿಮಾದ ಬಗ್ಗೆ ನಿಜವಾದ ಕಾಳಜಿ, ವಿಷಯದ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿ ಸಿನಿಮಾ ಮಾಡಿದ್ದರು. ಪ್ರವೀಣ್ ಮಾಡಿದ್ದು ನಿಜವಾದ ಮಣ್ಣಿನ (ಮುಲ್ಷಿ)ಯ ಕತೆ. ಆದರೆ ರೀಮೇಕ್ನಲ್ಲಿ ಆ ಮಣ್ಣಿನ ಗುಣ ಇಲ್ಲವಾಯಿತು” ಎಂದಿದ್ದಾರೆ.
ಸಲ್ಮಾನ್ ಖಾನ್ರ ‘ಅಂತಿಮ್‘ ಸಿನಿಮಾದಲ್ಲಿ ಸಲ್ಮಾನ್ ಖಾನ್ರ ಹೀರೋಯಿಸಂ ತುಸು ಅಧಿಕವಾಗಿತ್ತು, ಆದರೆ ಮೂಲ ಸಿನಿಮಾದಲ್ಲಿ ಯಾವುದೇ ಹೀರೋಯಿಸಂಗಳಿಗೆ ಕಟ್ಟು ಬೀಳದೆ ಕೇವಲ ಪಾತ್ರಗಳು, ಕತೆಗಷ್ಟೆ ಪ್ರಾಮುಖ್ಯತೆ ನೀಡಿ ಸಿನಿಮಾ ಮಾಡಲಾಗಿತ್ತು. ಹಿಂದಿಯಲ್ಲಿ, ಸಲ್ಮಾನ್ ಖಾನ್ರ ಇಮೇಜಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಸಿನಿಮಾದಲ್ಲಿ ಮಾಡಲಾಗಿತ್ತು.
Published On - 8:05 pm, Thu, 10 August 23