‘ಜೈಲಿನಿಂದ ಬೇಗ ಬರ್ತೀನಿ ಬೇಬಿ’: ಜಾಕ್ವೆಲಿನ್ ಜನ್ಮದಿನಕ್ಕೆ ಕೈ ಬರಹದ ಪ್ರೇಮಪತ್ರ ರವಾನಿಸಿದ ಸುಕೇಶ್ ಚಂದ್ರಶೇಖರ್
Jacqueline Fernandez Birthday: ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಆಪ್ತವಾಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳೇ ಸಾಕ್ಷಿ ಒದಗಿಸಿವೆ. ಜೈಲಿನಿಂದ ಬಂದ ಬಳಿಕ ಮತ್ತೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಾಲ ಕಳೆಯಲು ಸುಕೇಶ್ ತೀರ್ಮಾನಿಸಿದ್ದಾನೆ.
ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ (Sukesh Chandrasekhar) ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾನೆ. ಈತನ ಜೊತೆ ನಂಟು ಹೊಂದಿದ್ದ ಕಾರಣಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಬಾರಿ ಅವರು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದಾರೆ. ಜೈಲು ಪಾಲಾದರೂ ಕೂಡ ಸುಕೇಶ್ ಚಂದ್ರಶೇಖರ್ಗೆ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮೇಲೆ ಇರುವ ಪ್ರೀತಿ ಕಡಿಮೆ ಆಗಿಲ್ಲ. ಪದೇಪದೇ ಆತ ತನ್ನ ಪ್ರೇಯಸಿಗೆ ಪತ್ರ ಬರೆಯುತ್ತಾನೆ. ಇಂದು (ಆಗಸ್ಟ್ 11) ಜಾಕ್ವೆಲಿನ್ ಫರ್ನಾಂಡಿಸ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಕೈ ಬರಹದಲ್ಲೇ ಪ್ರೇಮಪತ್ರವನ್ನು (Sukesh Chandrasekhar Love Letter) ಬರೆದು ಕಳಿಸಿದ್ದಾನೆ ಸುಕೇಶ್ ಚಂದ್ರಶೇಖರ್. ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರ ವೈರಲ್ ಆಗಿದೆ.
ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಆಪ್ತವಾಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳೇ ಸಾಕ್ಷಿ ಒದಗಿಸಿವೆ. ಜೈಲಿನಿಂದ ಬಂದ ಬಳಿಕ ಮತ್ತೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಾಲ ಕಳೆಯಲು ಸುಕೇಶ್ ತೀರ್ಮಾನಿಸಿದ್ದಾನೆ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿ ಪತ್ರದಲ್ಲಿ ಪದಗಳ ಜೊತೆ ಚಿತ್ರವನ್ನೂ ಬರೆದು ಕಳಿಸಿದ್ದಾನೆ. ಈ ಮೊದಲು ಕೂಡ ಆತ ಪತ್ರ ಬರೆದು ಸುದ್ದಿಯಾಗಿದ್ದ.
ಇದನ್ನೂ ಓದಿ: ‘ಜಾಕ್ವೆಲಿನ್ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್ ಚಂದ್ರಶೇಖರ್ ಹೊಸ ಪುರಾಣ
‘ಶೀಘ್ರದಲ್ಲೇ ಈ ಎಲ್ಲ ತೊಂದರೆಗಳು ಮುಗಿಯಲಿವೆ. ಬೇಗ ಬರುತ್ತೇನೆ. ಮುಂದಿನ ವರ್ಷ ಜನ್ಮದಿನವನ್ನು ಒಟ್ಟಿಗೆ ಆಚರಿಸೋಣ. ಅದನ್ನು ತುಂಬ ವಿಶೇಷವಾಗಿಸುತ್ತೇನೆ ಅಂತ ನಿನಗೆ ನಾನು ಪ್ರಾಮಿಸ್ ಮಾಡುತ್ತೇನೆ. ಜಗತ್ತಿಗೆ ಹೊಟ್ಟೆಕಿಚ್ಚು ಆಗಬಹುದು. ನನ್ನ ಗೊಂಬೆಯೇ.. ನೀನು ಸ್ಪೆಷಲ್, ನೀನು ಸೂಪರ್ ಸ್ಟಾರ್. ನನ್ನ ಬದುಕಿನ ವಿಶೇಷ ನೀನು. ಈ ದಿನವನ್ನು ಎಂಜಾಯ್ ಮಾಡು. ಯಾವುದಕ್ಕೂ ಹೆದರಬೇಡ. ನಿನಗಾಗಿ ನಾನಿದ್ದೇನೆ. ನನಗಾಗಿ ಒಂದು ಪೀಸ್ ಕೇಕ್ ಹೆಚ್ಚು ತಿನ್ನು’ ಎಂದು ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾನೆ.
ಇದನ್ನೂ ಓದಿ: Jacqueline Fernandez: ವಂಚನೆ ಆರೋಪಿ ಸುಕೇಶ್ ತನ್ನ ಕನಸಿನ ಹುಡುಗ ಅಂತ ತಿಳಿದು ಮದುವೆ ಆಗಲು ನಿರ್ಧರಿಸಿದ್ದ ಜಾಕ್ವೆಲಿನ್
ಸುಕೇಶ್ ಚಂದ್ರಶೇಖರ್ ಇಷ್ಟೆಲ್ಲ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರೂ ಕೂಡ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮತ್ತು ಸುಕೇಶ್ ಚಂದ್ರಶೇಖರ್ ನಡುವೆ ಈ ರೀತಿಯ ಸಂಬಂಧ ಇಲ್ಲ ಎಂದು ಅವರು ಮೊದಲೇ ಹೇಳಿಕೆ ನೀಡಿದ್ದರು. ಕೇವಲ ವೃತ್ತಿಪರ ಕಾರಣಕ್ಕೆ ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ದರು. ಸುಕೇಶ್ ಚಂದ್ರಶೇಖರ್ ಜೈಲಿನಿಂದ ಹೊರಬಂದ ಬಳಿಕ ಒಂದಷ್ಟು ಹೊಸ ವಿಚಾರಗಳು ಬಹಿರಂಗ ಆಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.