‘ಇದ್ದಕ್ಕಿದ್ದಂತೆ ಕಿವಿ ಕೇಳಿಸುತ್ತಿಲ್ಲ’; ಗಾಯಕಿ ಅಲ್ಕಾ ಯಾಗ್ನಿಕ್​ಗೆ ಗಂಭೀರ ಆರೋಗ್ಯ ಸಮಸ್ಯೆ

ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್​ ಅವರು ಒಂದು ಬೇಸರದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಶ್ರವಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಏನೂ ಕೇಳಿಸುತ್ತಿಲ್ಲ! ಗಾಯಕಿಯಾದ ಅವರಿಗೆ ಇದು ಊಹಿಸಲೂ ಸಾಧ್ಯವಾಗದಂತಹ ಶಾಕ್​. ಈ ಬಗ್ಗೆ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಲ್ಲದೇ, ಜೋರಾಗಿ ಯಾವುದೇ ಶಬ್ದ ಅಥವಾ ಸಂಗೀತ ಕೇಳಿಸಿಕೊಳ್ಳಬೇಡಿ ಎಂದು ಅವರು ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ.

‘ಇದ್ದಕ್ಕಿದ್ದಂತೆ ಕಿವಿ ಕೇಳಿಸುತ್ತಿಲ್ಲ’; ಗಾಯಕಿ ಅಲ್ಕಾ ಯಾಗ್ನಿಕ್​ಗೆ ಗಂಭೀರ ಆರೋಗ್ಯ ಸಮಸ್ಯೆ
ಅಲ್ಕಾ ಯಾಗ್ನಿಕ್​

Updated on: Jun 18, 2024 | 3:08 PM

ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಅಲ್ಕಾ ಯಾಗ್ನಿಕ್​ (Singer Alka Yagnik) ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ (Sensory Hearing loss) ಉಂಟಾಗಿದೆ. ಸಂಗೀತವನ್ನೇ ಉಸಿರಾಗಿಸಿಕೊಂಡ ಅವರಿಗೆ ಈಗ ಕಿವಿ ಕೇಳಿಸುತ್ತಿಲ್ಲ! ಹೌದು, ಈ ವಿಚಾರವನ್ನು ಅವರೇ ಹಂಚಿಕೊಂಡಿದ್ದಾರೆ. ವೃತ್ತಿಪರ ಗಾಯಕಿ ಎಂದಮೇಲೆ ಪ್ರತಿದಿನ ಸಂಗೀತವನ್ನು ಕೇಳಿಸಿಕೊಳ್ಳಬೇಕು ಹಾಗೂ ಅಭಿಮಾನಿಗಳಿಗೆ ಇಷ್ಟವಾಗುವಂತೆ ಹಾಡಬೇಕು. ಈ ಕೆಲಸಕ್ಕೆ ತುಂಬಾ ಚೆನ್ನಾಗಿ ಕಿವಿ ಕೇಳಿಸುವುದು ಅತ್ಯಗತ್ಯ. ಆದರೆ ಈಗ ಅಲ್ಕಾ ಯಾಗ್ನಿಕ್​ ಅವರಿಗೆ ಕಿವಿ ಕೇಳಿಸುತ್ತಿಲ್ಲ ಎಂಬ ವಿಷಯ ತಿಳಿದ ಎಲ್ಲರಿಗೂ ಬೇಸರ ಆಗಿದೆ. ಆದಷ್ಟು ಬೇಗ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದು ಫ್ಯಾನ್ಸ್​ ಪ್ರಾರ್ಥಿಸುತ್ತಿದ್ದಾರೆ.

‘ನನ್ನೆಲ್ಲ ಅಭಿಮಾನಿಗಳು, ಸ್ನೇಹಿತರು, ಫಾಲೋವರ್ಸ್​ ಮತ್ತು ಹಿತೈಷಿಗಳಿಗೆ ಈ ವಿಷಯ ತಿಳಿಸುತ್ತಿದ್ದೇನೆ. ಕೆಲವು ವಾರಗಳ ಹಿಂದೆ ನಾನು ವಿಮಾನದಿಂದ ಹೊರಬಂದಾಗ ನನಗೆ ಏನೂ ಕೇಳಿಸುತ್ತಿಲ್ಲ ಎಂಬುದು ತಿಳಿಯಿತು. ಆ ಬಳಿಕ ಸ್ವಲ್ಪ ಧೈರ್ಯ ತಂದುಕೊಂಡು ಈ ಬಗ್ಗೆ ಮೌನ ಮುರಿಯುತ್ತಿದ್ದೇನೆ. ಇತ್ತೀಚೆಗೆ ಯಾಕೆ ನಾನು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕೇಳುತ್ತಿದ್ದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಈ ವಿಷಯ ಹೇಳುತ್ತಿದ್ದೇನೆ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಅಲ್ಕಾ ಯಾಗ್ನಿಕ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗಾಯಕಿ ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ​; ಯೂಟ್ಯೂಬ್​ ಪ್ರಸಾರದಲ್ಲಿ ಸತತ 3ನೇ ಬಾರಿ ನಂ.1 ಪಟ್ಟ

‘ಈ ರೀತಿ ಸಮಸ್ಯೆ ಆಗಿದೆ ಎಂಬುದನ್ನು ವೈದ್ಯರು ತಿಳಿಸಿದರು. ನನಗೆ ತಿಳಿಯದಂತೆಯೇ ಈ ರೀತಿ ಆಗಿದೆ. ನಾನು ಇದರಿಂದ ಗುಣಮುಖವಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ನನಗಾಗಿ ಪ್ರಾರ್ಥಿಸಿ. ಹೆಡ್​ಫೋನ್​ ಅಥವಾ ಇತರೆ ಸಾಧನಗಳ ಮೂಲಕ ಜೋರಾದ ಶಬ್ದವನ್ನು ಕೇಳಿಸಿಕೊಳ್ಳಬೇಡಿ. ನನ್ನ ವೃತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಒಂದು ದಿನ ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ, ಬೆಂಬಲದಿಂದ ಗುಣಮುಖವಾಗಿ ಮತ್ತೆ ಬರುತ್ತೇನೆ ಎಂಬ ನಂಬಿಕೆ ನನಗಿದೆ. ಈ ಕಷ್ಟದ ಸಂದರ್ಭದಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವ ನೀವು ಮತ್ತು ನಿಮ್ಮ ಬೆಂಬಲ ನನಗೆ ಅತಿ ಮುಖ್ಯ’ ಎಂದು ಅಲ್ಕಾ ಯಾಗ್ನಿಕ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಲ್ಕಾ ಯಾಗ್ನಿಕ್ ಅವರಿಗೆ ಈಗ 58 ವರ್ಷ ವಯಸ್ಸು. ಈಗಲೂ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಇತ್ತೀಚೆಗೆ ತೆರೆಕಂಡ ‘ಕ್ರೂ’ ಹಾಗೂ ‘ಅಮರ್​ ಸಿಂಗ್​ ಚಮ್ಕೀಲಾ’ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. 2 ಬಾರಿ ರಾಷ್ಟ್ರ ಪ್ರಶಸ್ತಿ, 7 ಬಾರಿ ಫಿಲ್ಮ್​ ಫೇರ್​ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅಲ್ಕಾ ಯಾಗ್ನಿಕ್​ ಪಾತ್ರರಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us