ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಆ್ಯಕ್ಷನ್ ಕಟ್ ಹೇಳಿದ್ದ ‘ಪದ್ಮಾವತ್’ ಚಿತ್ರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆರಂಭದಲ್ಲಿ ಈ ಸಿನಿಮಾದ ಹೆಸರು ‘ಪದ್ಮಾವತಿ’ ಎಂದಿತ್ತು. ಆದರೆ, ಈ ಟೈಟಲ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಅನ್ನು ‘ಪದ್ಮಾವತ್’ ಎಂದು ಬದಲಿಸಲಾಗಿತ್ತು. ಖಿಲ್ಜಿ ಹಾಗೂ ಪದ್ಮಾವತಿ ನಡುವೆ ರೊಮ್ಯಾಂಟಿಕ್ ದೃಶ್ಯಗಳನ್ನು ಇಡಲಾಗಿದೆ ಎಂಬ ಊಹೆಯೇ ಈ ವಿವಾದ ಹೊತ್ತಿಕೊಳ್ಳಲು ಪ್ರಮುಖ ಕಾರಣವಾಗಿತ್ತು. ಸಿನಿಮಾ ತೆರೆಕಂಡು ದೊಡ್ಡಮಟ್ಟದಲ್ಲಿ ಹಿಟ್ ಆಗಿದ್ದು ಈಗ ಇತಿಹಾಸ. ಈ ಚಿತ್ರ ತೆರೆಕಂಡು ನಾಲ್ಕು ವರ್ಷಗಳ ಬಳಿಕ ಬನ್ಸಾಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ (Gangubai Kathiawadi Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ವಿವಾದ ಸೃಷ್ಟಿಸುವ ಸೂಚನೆ ಸಿಕ್ಕಿದೆ. ಅದೂ ಟೈಟಲ್ ವಿಚಾರಕ್ಕೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ಕಾಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕಾಮಾಟಿಪುರದ ಡಾನ್ ಆಗುವುದಕ್ಕೂ ಮೊದಲು ಗಂಗೂಬಾಯಿ ವೇಶ್ಯೆ ಆಗಿರುತ್ತಾರೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಈಗ ಚಿತ್ರ ವಿವಾದದ ಹಾದಿ ಹಿಡಿಯುವ ಸಾಧ್ಯತೆ ಇದೆ.
ಕರ್ನಾಟಕದ ಹಿರಿಯ ಗಾಯಕಿ ಗಂಗೂಬಾಯಿ ಹಾನಗಲ್ ಕನ್ನಡದ ಕೀರ್ತಿ. ಸಂಗೀತ ಕ್ಷೇತ್ರದಲ್ಲಿ ಅವರದ್ದು ದೊಡ್ಡ ಹೆಸರು. ಈಗ ಚಿತ್ರದ ಟೈಟಲ್ ಬಗ್ಗೆ ವಿವಾದ ಆಗುವುದಕ್ಕೂ ಕಾರಣವಾಗಿದ್ದು, ಗಂಗೂಬಾಯಿ ಹೆಸರು. ‘ಸಿನಿಮಾ ಟೈಟಲ್‌ನಿಂದ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನ ಆಗಿದೆ. ಗಂಗೂಬಾಯಿ ಹಾನ್ಗಲ್ ಕನ್ನಡದ ಕೀರ್ತಿ. ಸಿನಿಮಾ ಹೆಸರು ಬದಲಿಸಬೇಕು’ ಎಂದು ಕನ್ನಡ ಜಾಗೃತಿ ವೇದಿಕೆ ಆಗ್ರಹಿಸಿದೆ. ಒಂದೊಮ್ಮೆ ಈ ಪ್ರತಿಭಟನೆ ಜೋರಾದರೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಅಡ್ಡಿ ಉಂಟಾಗಬಹುದು.
‘ಗಂಗೂಬಾಯಿ ಕಾಠಿಯಾವಾಡಿ’ ಟ್ರೇಲರ್ ರಿಲೀಸ್:
‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದರ ಝಲಕ್ ಇಂದು (ಫೆಬ್ರವರಿ 4) ರಿಲೀಸ್ ಆದ ಟ್ರೇಲರ್ನಲ್ಲಿದೆ. ಇಡೀ ಟ್ರೇಲರ್ನಲ್ಲಿ ಆಲಿಯಾ ಭಟ್ ಅವರ ನಟನೆ, ಬನ್ಸಾಲಿ ಸಿನಿಮಾ ಮೇಕಿಂಗ್ ಗಮನ ಸೆಳೆಯುತ್ತಿದೆ. ಅಜಯ್ ದೇವಗನ್ ಪಾತ್ರ ಕೂಡ ಟ್ರೇಲರ್ನಲ್ಲಿ ಬಂದು ಹೋಗುತ್ತದೆ. ಅವರ ಪಾತ್ರ ಏನು ಎಂಬ ರಹಸ್ಯವನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಇಡೀ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿದೆ. ಟ್ರೇಲರ್ ರಿಲೀಸ್ ಆದ ಗಂಟೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: Alia Bhatt: ವಿಭಿನ್ನ ಗೆಟಪ್ಗಳಲ್ಲಿ ಆಲಿಯಾ ಭಟ್; ಇಲ್ಲಿವೆ ಫೋಟೋಗಳು
‘ಗಂಗೂಬಾಯಿ ಕಾಠಿಯಾವಾಡಿ’ ರಿಲೀಸ್ ದಿನಾಂಕ ಘೋಷಣೆ; ಕೊವಿಡ್ ಮಧ್ಯೆ ಗೆಲ್ಲಲಿದೆಯೇ ಆಲಿಯಾ ಚಿತ್ರ?