ನಟ ಶಾರುಖ್ ಖಾನ್ (Shah Rukh Khan) ಅವರ ಪತ್ನಿ ಗೌರಿ ಖಾನ್ ಅವರು ತಮ್ಮ ಹೊಸ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬದ ಬಗೆಗಿನ ಒಂದಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿಯ ಮೊದಲ ಪುತ್ರ ಆರ್ಯನ್ ಖಾನ್ (Aryan Khan) ಈಗ ಸಿನಿಮಾ ಮತ್ತು ಬಿಸ್ನೆಸ್ ಕಡೆಗೆ ಗಮನ ಹರಿಸಿದ್ದಾರೆ. ಈ ಹಿಂದೆ ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಜೈಲು ಸೇರಿದ್ದ ಅವರು ನಂತರ ಆರೋಪಮುಕ್ತರಾದರು. ಈಗ ಅವರ ಬಗ್ಗೆ ಗೌರಿ ಖಾನ್ ಮಾತನಾಡಿದ್ದಾರೆ. ಅಚ್ಚರಿ ಎಂದರೆ ಶಾರುಖ್ ಖಾನ್ಗಿಂತಲೂ ಆರ್ಯನ್ ಖಾನ್ ಹೆಚ್ಚು ಬ್ಯುಸಿ ಆಗಿದ್ದಾರಂತೆ. ಅವರ ಡೇಟ್ಸ್ ಪಡೆಯುವುದೇ ಕಷ್ಟ ಎಂದು ಗೌರಿ ಖಾನ್ (Gauri Khan) ಹೇಳಿದ್ದಾರೆ.
ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಅವರು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕದಲ್ಲಿ ಅವರ ಫ್ಯಾಮಿಲಿ ಫೋಟೋ ಇದೆ. ಅದನ್ನು ಕ್ಲಿಕ್ಕಿಸುವ ಸಲುವಾಗಿ ಕುಟುಂಬದ ಎಲ್ಲರೂ ಬಿಡುವು ಮಾಡಿಕೊಳ್ಳಬೇಕಿತ್ತು. ಶಾರುಖ್ ಖಾನ್ ಹಲವು ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ ಕೂಡ ಫ್ಯಾಮಿಲಿ ಫೋಟೋಶೂಟ್ಗಾಗಿ ಅವರ ಡೇಟ್ಸ್ ಸುಲಭವಾಗಿ ಸಿಕ್ಕಿದೆ. ಆದರೆ ಆರ್ಯನ್ ಖಾನ್ ಅವರ ಡೇಟ್ಸ್ ಪಡೆಯುವುದು ಗೌರಿ ಖಾನ್ಗೆ ಕಷ್ಟವಾಯಿತು. ಹಾಗಾಗಿ ಶಾರುಖ್ ಖಾನ್ಗಿಂತಲೂ ಆರ್ಯನ್ ಖಾನ್ ಹೆಚ್ಚು ಬ್ಯುಸಿ ಆಗಿದ್ದಾರೆ ಎಂದು ಗೌರಿ ಹೇಳಿದ್ದಾರೆ.
ಬಾಲಿವುಡ್ನಲ್ಲಿ ಅನೇಕ ಸ್ಟಾರ್ ಕಿಡ್ಗಳು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಆರ್ಯನ್ ಖಾನ್ ಈ ವಿಚಾರದಲ್ಲಿ ಕೊಂಚ ಭಿನ್ನ. ನಟನೆಗಿಂತಲೂ ಹೆಚ್ಚಾಗಿ ಬೇರೆ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇದೆ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು, ಬಿಸ್ನೆಸ್ ಬಗ್ಗೆಯೂ ಅವರು ಇಂಟರೆಸ್ಟ್ ತೋರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಆರ್ಯನ್ ಖಾನ್ ಅವರು ಬಟ್ಟೆ ವ್ಯಾಪಾರ ಆರಂಭಿದರು. ಅಂದರೆ, ತಮ್ಮದೇ ಹೊಸ ಬ್ರ್ಯಾಂಡ್ನ ಕಾಸ್ಟ್ಯೂಮ್ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದರು. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ.
ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಂತಾದ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅದಕ್ಕೆ ಆರ್ಯನ್ ಖಾನ್ ಕೂಡ ಸೇರ್ಪಡೆ ಆಗಿದ್ದಾರೆ. ಕೇವಲ ಆನ್ಲೈನ್ನಲ್ಲಿ ಮಾತ್ರ ಅವರು ಮಾರಾಟ ಮಾಡುತ್ತಿದ್ದಾರೆ. ಆರ್ಯನ್ ಖಾನ್ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿವೆ. ಒಂದು ಜಾಕೆಟ್ನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ. ಟಿ-ಶರ್ಟ್ ಬೆಲೆ 24 ಸಾವಿರ ರೂಪಾಯಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.