Katrina Kaif Marriage: ಇನ್ನೇನು ಕೆಲವೇ ದಿನಗಳಲ್ಲಿ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮದುವೆ ನಡೆಯಲಿದೆ. ಅದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ರಾಜಸ್ಥಾನದ ಖಾಸಗಿ ಹೋಟೆಲ್ನಲ್ಲಿ ವಿವಾಹ ಸಮಾರಂಭ ಜರುಗಲಿದ್ದು, ದಿನಕ್ಕೊಂದು ವಿಶೇಷ ಸುದ್ದಿ ಕೇಳಿ ಬರುತ್ತಿದೆ. ಈಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ (Katrina Kaif Vicky Kaushal Wedding) ಮಂಟಪದ ಬಗ್ಗೆ ಅಚ್ಚರಿಯ ಮಾಹಿತಿ ಹರಡಿದೆ. ಜಗಮಗಿಸುವ ಗಾಜಿನ ಮಂಟಪದಲ್ಲಿ ಕತ್ರಿನಾ ಮತ್ತು ವಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ವಿಶೇಷ ಏನೆಂದರೆ, ಮದುಮಗ ವಿಕ್ಕಿ ಕೌಶಲ್ ಅವರು 7 ಬಿಳಿ ಕುದುರೆಗಳ ಜತೆಯಲ್ಲಿ ಈ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ಕೇಳಿದ ಬಳಿಕ ಸ್ಟಾರ್ ಜೋಡಿಯ ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.
ಕನಸಿನ ಲೋಕದ ರೀತಿಯಲ್ಲಿ ಮದುವೆ ಆಗಬೇಕು ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಆಸೆಪಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆಯೇ ಮದುವೆ ತಯಾರಿ ನಡೆಯುತ್ತಿದೆ. ಇದೊಂದು ದೃಶ್ಯ ವೈಭವ ಆಗಿರಲಿದ್ದು, ಅದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಲು ಯಾರಿಗೂ ಅವಕಾಶ ಇಲ್ಲ. ಹಾಗಾಗಿ ಮದುವೆಗೆ ಬರುವ ಅತಿಥಿಗಳು ಮೊಬೈಲ್ ತರುವಂತಿಲ್ಲ. ಯಾವುದೇ ಫೋಟೋ ಅಥವಾ ವಿಡಿಯೋ ಚಿತ್ರೀಕರಿಸುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಲಾಗಿದೆ.
ಮದುವೆ ಮಂಟಪದಲ್ಲಿ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ನೋಡಿಕೊಳ್ಳಲು 100 ಬೌನ್ಸರ್ಗಳು ನಿಯೋಜನೆಗೊಂಡಿದ್ದಾರೆ. ಇದರ ಜತೆಗೆ ಇವರು ಭದ್ರತೆಯನ್ನೂ ನೀಡಲಿದ್ದಾರೆ. ಮದುವೆ ನಡೆಯುವ ಸ್ಥಳದಲ್ಲಿ ಈ ಬೌನ್ಸರ್ಗಳು ಓಡಾಟ ನಡೆಸುತ್ತಿರುತ್ತಾರೆ. ಮೊಬೈಲ್ನಲ್ಲಿ ಯಾರೂ ಫೋಟೋ ಕ್ಲಿಕ್ ಮಾಡದಂತೆ ನೋಡಿಕೊಳ್ಳುವುದು ಇವರ ಕೆಲಸ. ಈ ಕೆಲಸಕ್ಕಾಗಿ 100 ಬೌನ್ಸರ್ಗಳನ್ನು ನೇಮಕ ಮಾಡಿಕೊಂಡಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಎಲ್ಲಾ ಬೌನ್ಸರ್ಗಳು ಜೈಪುರದಿಂದ ಬರಲಿದ್ದಾರೆ ಎಂದು ವರದಿ ಆಗಿದೆ.
ಈಗ ನಡೆಯುತ್ತಿರುವ ಮದುವೆ ಸಾಮಾನ್ಯ ಮದುವೆ ಅಲ್ಲ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಮದುವೆ ಹಾಜರಾಗುತ್ತಿದ್ದಾರೆ. ಹೀಗಾಗಿ, ಭದ್ರತೆ ನೀಡಬೇಕು. ಹೋಟೆಲ್ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಬೇಕು. ಮತ್ತೆ ಕೊವಿಡ್ ಹೆಚ್ಚುವ ಭಯ ಇರುವುದರಿಂದ ಸರ್ಕಾರದ ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮದುವೆ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಅತಿಥಿಗಳ ಲಿಸ್ಟ್ ನೀಡಬೇಕು. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಸಹಾಯಕರು ಈ ಕೆಲಸವನ್ನು ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಕತ್ರಿನಾ-ವಿಕ್ಕಿ ಮದುವೆ ಕದ್ದು ನೋಡಲು ಡ್ರೋನ್ ಬಳಸಿದರೆ ಕಾದಿದೆ ಶಿಕ್ಷೆ; ಶೂಟ್ ಮಾಡಲು ನಿರ್ಧಾರ
ಕತ್ರಿನಾ ಕೈಫ್-ವಿಕ್ಕಿ ಮದುವೆಗೆ ವಿಶೇಷ ಮೆಹಂದಿ; ಇದರ ಬೆಲೆ ಕೇಳಿ ಅಚ್ಚರಿಪಟ್ಟ ಫ್ಯಾನ್ಸ್
Published On - 8:40 am, Mon, 6 December 21