ನಟಿ ಸಾಯಿ ಪಲ್ಲವಿ ಅವರು ವಿವಾದಗಳಿಂದ ಸಾಧ್ಯವಾದಷ್ಟು ದೂರ ಇರಲು ಪ್ರಯತ್ನಿಸುತ್ತಾರೆ. ಹಾಗಿದ್ದರೂ ಕೂಡ ಅವರ ಬಗ್ಗೆ ಕೆಲವರು ಗಾಸಿಪ್ ಹಬ್ಬಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತುಂಬ ಫೇಮಸ್ ಆಗಿರುವ ಸಾಯಿ ಪಲ್ಲವಿ ಅವರು ಈಗ ಬಾಲಿವುಡ್ನ ಕದ ತಟ್ಟಿದ್ದಾರೆ. ಬಿ-ಟೌನ್ಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಕೆಲವರು ಸಾಯಿ ಪಲ್ಲವಿ ಬಗ್ಗೆ ಗಾಸಿಪ್ ಹರಡುತ್ತಿದ್ದಾರೆ. 2 ಮಕ್ಕಳನ್ನು ಹೊಂದಿರುವ ವಿವಾಹಿತ ಪುರುಷನ ಜೊತೆ ಸಾಯಿ ಪಲ್ಲವಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಯಿ ಪಲ್ಲವಿ ಅವರ ಇಮೇಜ್ಗೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ಗಾಳಿಸುದ್ದಿ ಹರಡಲಾಗಿದೆ ಎನ್ನಲಾಗಿದೆ.
ಆಮಿರ್ ಖಾನ್ ಮಗ ಜುನೈದ್ ಖಾನ್ ನಟನೆಯ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ ಆಗಿ ನಟಿಸುತ್ತಿದ್ದಾರೆ. ಅಲ್ಲದೇ, ರಣಬೀರ್ ಕಪೂರ್ ನಟನೆಯ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ದಕ್ಷಿಣದ ನಟಿಗೆ ಇಂಥ ಮಹತ್ವದ ಪ್ರಾಜೆಕ್ಟ್ಗಳು ಸಿಕ್ಕಿದ್ದಕ್ಕೆ ಬಿ-ಟೌನ್ನ ಕೆಲವರಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಆ ಕಾರಣದಿಂದಲೇ ಸಾಯಿ ಪಲ್ಲವಿ ಬಗ್ಗೆ ಡೇಟಿಂಗ್ ವದಂತಿ ಹಬ್ಬಿಸುವ ಕುತಂತ್ರ ನಡೆದಿದೆ.
ಸಾಯಿ ಪಲ್ಲವಿ ಅವರು ಪ್ರತಿಭಾನ್ವಿತ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ. ಸೌತ್ ಸಿನಿಮಾಗಳಲ್ಲಿ ಅವರು ಛಾಪು ಮೂಡಿಸಿದ್ದಾರೆ. ಇಂಥ ನಟಿ ಬಾಲಿವುಡ್ಗೆ ಎಂಟ್ರಿ ನೀಡಿರುವುದರಿಂದ ಅಲ್ಲಿನ ಕೆಲವು ನಟಿಯರಿಗೆ ಅಭದ್ರತೆ ಕಾಡಲು ಆರಂಭಿಸಿದೆ. ಒಂದು ವೇಳೆ ಸಾಯಿ ಪಲ್ಲವಿ ಅವರು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಲು ಶುರು ಮಾಡಿದರೆ ಹಿಂದಿಯ ಕೆಲವು ಹೀರೋಯಿನ್ಗಳಿಗೆ ಕೆಲಸ ಇಲ್ಲದಂತೆ ಆಗುತ್ತದೆ. ಹಾಗಾಗಿ, ಸಾಯಿ ಪಲ್ಲವಿಯ ಬಗ್ಗೆ ಅಪಪ್ರಚಾರ ಮಾಡುವ ಹಿನ್ನಾರ ನಡೆದಿದೆ ಎಂದು ಫ್ಯಾನ್ಸ್ ವಾದಿಸುತ್ತಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ನಟಿ ಸಾಯಿ ಪಲ್ಲವಿ ಅಭಿನಯದ ಇನ್ನೊಂದು ಚಿತ್ರ 40 ಕೋಟಿ ರೂ.ಗೆ ಸೇಲ್
ಬಾಲಿವುಡ್ನ ಕೆಲವು ನಟಿಯರು ತಮ್ಮ ಪಿ.ಆರ್. ತಂತ್ರವನ್ನು ಬಳಸಿ ಇಂಥ ಗಾಸಿಪ್ ಹಬ್ಬಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ವ್ಯಕ್ತಿಯ ಜೊತೆ ಸಾಯಿ ಪಲ್ಲವಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇಲ್ಲಿಯೂ ಬಹಿರಂಗ ಆಗಿಲ್ಲ. ಈ ಮೊದಲು ಕೂಡ ಸಾಯಿ ಪಲ್ಲವಿ ಬಗ್ಗೆ ಇಂಥ ಗಾಳಿಸುದ್ದಿ ಹರಡಿತ್ತು. ಆದರೆ ಅವುಗಳಿಗೆ ನಟಿಯ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಇಂಥ ಗಾಸಿಪ್ಗಳನ್ನು ನಿರ್ಲಕ್ಷಿಸಿ, ಕೆಲಸದ ಕಡೆಗೆ ಸಾಯಿ ಪಲ್ಲವಿ ಗಮನ ನೀಡಿದ್ದಾರೆ.
‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಶೂಟಿಂಗ್ ಸೆಟ್ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದವು. ಸಾಯಿ ಪಲ್ಲವಿ ಅವರು ಸೀತೆಯ ಲುಕ್ನಲ್ಲಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳು ಥ್ರಿಲ್ ಆದರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.