‘ರಾಮಾಯಣ’ ನಟಿ ಸಾಯಿ ಪಲ್ಲವಿ ಅಭಿನಯದ ಇನ್ನೊಂದು ಚಿತ್ರ 40 ಕೋಟಿ ರೂ.ಗೆ ಸೇಲ್
‘ತಂಡೇಲ್’ ಸಿನಿಮಾದಲ್ಲಿ ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಅಷ್ಟರಲ್ಲಾಗಲೇ ಒಟಿಟಿ ಪ್ರಸಾರ ಹಕ್ಕುಗಳು ಮಾರಾಟ ಆಗಿವೆ. 40 ಕೋಟಿ ರೂಪಾಯಿಗೆ ಈ ಡೀಲ್ ನಡೆದಿದೆ. ನೈಜ ಘಟನೆ ಆಧಾರಿತ ಈ ಸಿನಿಮಾದಲ್ಲಿ ನಾಗ ಚೈತನ್ಯ ಅವರಿಗೆ ಡಿಫರೆಂಟ್ ಪಾತ್ರವಿದೆ. ಈ ವರ್ಷವೇ ‘ತಂಡೇಲ್’ ಸಿನಿಮಾ ಬಿಡುಗಡೆ ಆಗಲಿದೆ.
ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸುವ ಕಲಾವಿದೆ ಅವರು. ಈಗ ಅವರು ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ ಸಾಯಿ ಪಲ್ಲವಿ ಅಭಿನಯದ ಇತರೆ ಸಿನಿಮಾಗಳಿಗೂ ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ಹೊಸ ನ್ಯೂಸ್ ಕೇಳಿಬಂದಿದೆ. ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ (Naga Chaitanya) ನಟನೆಯ ‘ತಂಡೇಲ್’ (Thandel) ಸಿನಿಮಾದ ಡಿಜಿಟಲ್ ಪ್ರಸಾರ ಹಕ್ಕು 40 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಚಿತ್ರತಂಡವೇ ಈ ಅಧಿಕೃತ ಮಾಹಿತಿ ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರಿಗೆ ‘ತಂಡೇಲ್’ ಸಿನಿಮಾದಲ್ಲಿ ಡಿಫರೆಂಟ್ ಗೆಟಪ್ ಇದೆ. ಮೀನುಗಾರರ ಬದುಕಿನ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಸಾಯಿ ಪಲ್ಲವಿ ಮಾತ್ರವಲ್ಲದೇ ನಾಗ ಚೈತನ್ಯ ಅವರ ಪಾಲಿಗೂ ಈ ಸಿನಿಮಾ ತುಂಬ ಸ್ಪೆಷಲ್ ಆಗಿದೆ. ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಸಿನಿಮಾ ಎಂಬ ಖ್ಯಾತಿಗೆ ‘ತಂಡೇಲ್’ ಪಾತ್ರವಾಗಿದೆ.
‘ತಂಡೇಲ್’ ಸಿನಿಮಾದ ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲ ಭಾಷೆಗಳ ವರ್ಷನ್ ಅನ್ನು ನೆಟ್ಫ್ಲಿಕ್ಸ್ ಖರೀದಿಸಿದೆ. ಈ ಮೊದಲು ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರು ‘ಲವ್ ಸ್ಟೋರಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಜೋಡಿ ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ‘ನೀವು ನಿಜ ಜೀವನದಲ್ಲಿಯೂ ಒಂದಾಗಬೇಕು’ ಎಂದು ಕಮೆಂಟ್ ಮಾಡಿದ ಅನೇಕರಿದ್ದಾರೆ. ‘ತಂಡೇಲ್’ ಚಿತ್ರದಲ್ಲಿ ಮತ್ತೊಮ್ಮೆ ಅವರನ್ನು ಜೋಡಿಯಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್
ಒಟಿಟಿಯಲ್ಲಿ ‘ತಂಡೇಲ್’ ಚಿತ್ರಕ್ಕೆ ಈ ಪರಿ ಬೇಡಿಕೆ ಬರಲು ಇನ್ನೊಂದು ಕಾರಣ ಇದೆ. ನಾಗ ಚೈತನ್ಯ ಅವರು ಒಟಿಟಿಯಲ್ಲಿ ಫೇಮಸ್ ಆಗಿದ್ದಾರೆ. ಅವರು ನಟಿಸಿದ ‘ಧೂತ’ ವೆಬ್ ಸರಣಿಯು ಜನಮನ ಗೆದ್ದಿದೆ. ಹಾಗಾಗಿ ಅವರ ಡಿಮ್ಯಾಂಡ್ ಜಾಸ್ತಿ ಆಗಿದೆ. ನೈಜ ಘಟನೆ ಆಧರಿಸಿ ‘ತಂಡೇಲ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಈ ಪರಿ ಬೇಡಿಕೆ ಬಂದಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.