
ಅಧ್ಯಾತ್ಮಿಕ ಹಾಗೂ ಭಕ್ತಿ ಪ್ರಧಾನ ಕಥಾಹಂದರ ಇರುವ ‘ಹನುಮಾನ್ ಅಂಶ್’ ಚಿತ್ರದ ಸೀಕ್ವೆಲ್‌ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸಲಿದ್ದಾರೆ ಎಂಬ ವದಂತಿಗಳಿಗೆ ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಾಗರ್ ತೆರೆ ಎಳೆದಿದ್ದಾರೆ. ಅಕ್ಷಯ್ ಕುಮಾರ್ ಎರಡನೇ ಭಾಗದಲ್ಲಿ ಇರಲಿದ್ದಾರೆಯೇ ಎಂಬ ಪ್ರಶ್ನೆಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ಅವರು, ಅಂತಹ ಯಾವುದೇ ವಿಷಯವನ್ನು ತಾವು ಖಚಿತಪಡಿಸಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅನುಪ್ರಿಯಾ ಅವರು ಅಕ್ಷಯ್ ಕುಮಾರ್ ತಮ್ಮ ನೆಚ್ಚಿನ ನಟ ಎಂದು ಹೇಳಿದ್ದರು. ಈ ವೇಳೆ ‘ಹನುಮಾನ್ ಅಂಶ್ 2’ ಚಿತ್ರದಲ್ಲಿ ಅಕ್ಷಯ್ ನಟಿಸುತ್ತಾರಾ ಎಂದು ಕೇಳಿದಾಗ, ‘ಅದನ್ನು ಮಹಾರಾಜ್ ಜೀ ಅವರೇ ಹೇಳಬೇಕು’ ಎಂದು ಉತ್ತರಿಸಿದ್ದರು. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಕ್ಷಯ್ ಕುಮಾರ್ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಊಹಾಪೋಹಗಳನ್ನು ಹಬ್ಬಿಸಿದ್ದರು.
ಈ ಕುರಿತು ‘ಹಿಂದೂಸ್ತಾನ್ ಟೈಮ್ಸ್’ ಜೊತೆ ಮಾತನಾಡಿರುವ ಅನುಪ್ರಿಯಾ ನಾಗರ್, ‘ಎರಡನೇ ಭಾಗದಲ್ಲಿ ಅಕ್ಷಯ್ ಕುಮಾರ್ ನಟಿಸುವ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ, ಅದೆಲ್ಲವೂ ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಎಲ್ಲ ಅಂತೆ-ಕಂತೆಗಳಿಗೆ ಅವರು ತೆರೆ ಎಳೆದಿದ್ದಾರೆ. ಹಾಗಾದರೆ, ‘ಹನುಮಾನ್ ಅಂಶ್’ ಸೀಕ್ವೆಲ್‌ನಲ್ಲಿ ಯಾವ ಕಲಾವಿದರು ನಟಿಸಬಹುದು ಎಂಬ ಕೌತುಕ ಮೂಡಿದೆ.
ಇದೇ ವೇಳೆ, ಚಿತ್ರದ ‘ಮೈನೇ ತೇರೆ ಹೀ ಭರೋಸೆ’ ಹಾಡಿನ ಮೂಲಕ ಗಮನಸೆಳೆದ ದೃಷ್ಟಿಹೀನ ಬುಂದೇಲಿ ಗಾಯಕ ಸುನೀಲ್ ಲೋಧಿ ಅವರಿಗೆ ಚಿಕಿತ್ಸೆ ಕೊಡಿಸಲು ಅನುಪ್ರಿಯಾ ಮುಂದಾಗಿದ್ದಾರೆ. ಸುನೀಲ್ ಅವರ ಕಣ್ಣಿನ ಚಿಕಿತ್ಸೆಗಾಗಿ ಮುಂಬೈನಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡಿಸುತ್ತಿದ್ದು, ಮಧ್ಯಪ್ರದೇಶ ಸರ್ಕಾರವೂ ಅವರ ಚಿಕಿತ್ಸೆಗೆ ಸಾಥ್ ನೀಡಿದೆ. ‘ಇದು ನಮ್ಮಿಬ್ಬರ ಜಂಟಿ ಪ್ರಯತ್ನ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಕಲೆಕ್ಷನ್ ಮೀರಿಸಿದ ‘ಹನುಮಾನ್ ಅಂಶ್’: ವಿಶ್ವಾದ್ಯಂತ 400 ಕೋಟಿ ರೂಪಾಯಿ ಗಳಿಕೆ
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಈ ಚಿತ್ರದಲ್ಲಿ ಶೋಭಿನವ್ ಸತ್ಯಾ ಮತ್ತು ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರವು ಬಿಡುಗಡೆಯಾಗಿ ಎರಡು ತಿಂಗಳು ಕಳೆದರೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ 312 ಕೋಟಿ ರೂ. ಹಾಗೂ ವಿಶ್ವಾದ್ಯಂತ 404.25 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ತನ್ನ ಬಜೆಟ್‌ಗಿಂತ ಸುಮಾರು 200 ಪಟ್ಟು ಹೆಚ್ಚು ಗಳಿಕೆ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.