50 ದಿನ ಪೂರೈಸಿ ದಾಖಲೆ ಬರೆದ ‘ಹನುಮಾನ್ ಅಂಶ್’; ಭಾರತದಲ್ಲೇ 300 ಕೋಟಿ ರೂ. ಕಲೆಕ್ಷನ್
ಬಿಡುಗಡೆಯಾದ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಹನುಮಾನ್ ಅಂಶ್’ ಚಿತ್ರವು ‘ಟಾಕ್ಸಿಕ್’, ‘ಹೈವಾನ್’, ‘ಪ್ಯಾರಡೈಸ್’ ಮುಂತಾದ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳನ್ನೇ ಹಿಂದಿಕ್ಕಿ ಪ್ರದರ್ಶನ ಕಾಣುತ್ತಿರುವುದು ಸದ್ಯ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದೆ. 50 ದಿನಗಳು ಕಳೆದರೂ ಕೂಡ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಕಲೆಕ್ಷನ್ ಹೆಚ್ಚುತ್ತಲೇ ಇದೆ.

ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಬೃಹತ್ ಬಜೆಟ್ ಸಿನಿಮಾಗಳೇ ಎರಡು ವಾರ ಪ್ರದರ್ಶನ ಕಾಣಲು ಹೆಣಗಾಡುತ್ತಿರುವ ಈ ಕಾಲದಲ್ಲಿ, ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಣ್ಣ ಸಿನಿಮಾವೊಂದು ತೆರೆಕಂಡು 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಇತಿಹಾಸ ಸೃಷ್ಟಿಸಿದೆ. ಪ್ರೇಕ್ಷಕರ ಅಭೂತಪೂರ್ವ ಬೆಂಬಲ ಹಾಗೂ ಅತ್ಯುತ್ತಮ ಬಾಯಿಮಾತಿನ ಪ್ರಚಾರದಿಂದ ಮೆಗಾ ಹಿಟ್ ಆಗಿ ಹೊರಹೊಮ್ಮಿರುವ ಚಿತ್ರವೇ ‘ಹನುಮಾನ್ ಅಂಶ್’. ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸೆಪ್ಟೆಂಬರ್ 26ಕ್ಕೆ ಥಿಯೇಟರ್‌ಗಳಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿರುವ ‘ಹನುಮಾನ್ ಅಂಶ್’ ಚಿತ್ರವು 51ನೇ ದಿನದಲ್ಲೂ ಭರ್ಜರಿ ಗಳಿಕೆ ದಾಖಲಿಸಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು 51ನೇ ದಿನದಂದು 6.26 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಇದರೊಂದಿಗೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಒಟ್ಟು ಗಳಿಕೆ ಬರೋಬ್ಬರಿ 297.79 ಕೋಟಿಗೆ ಏರಿಕೆಯಾಗಿದೆ. ಈ ಭಾನುವಾರದ ವೇಳೆಗೆ ಚಿತ್ರವು ಸುಲಭವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರುವುದು ಖಚಿತವಾಗಿದೆ.
ಆರಂಭದಲ್ಲಿ ಫ್ಲಾಪ್, ಆಮೇಲೆ ಸೂಪರ್ ಹಿಟ್:
ವಿಶೇಷವೆಂದರೆ, ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 10 ಲಕ್ಷ ರೂಪಾಯಿ. ಮೊದಲ ಎರಡು ವಾರಗಳಲ್ಲಿ ಬರೀ 1.50 ಕೋಟಿ ರೂಪಾಯಿ ಗಳಿಸಿ ಸೋಲಿನ ಹಾದಿಯಲ್ಲಿದ್ದ ಈ ಚಿತ್ರಕ್ಕೆ ಮೂರನೇ ವಾರದಿಂದ ಪ್ರೇಕ್ಷಕರೇ ಪ್ರಚಾರಕರ್ತರಾದರು. ನಾಲ್ಕನೇ ವಾರದಿಂದ ಈಚೆಗೆ ಪ್ರತಿ ವಾರ 60 ಕೋಟಿ ರೂಪಾಯಿಗೂ ಅಧಿಕ ನೆಟ್ ಕಲೆಕ್ಷನ್ ಮಾಡುತ್ತಾ ಬಂದಿರುವ ಈ ಸಿನಿಮಾ, 46ನೇ ದಿನವಾದ ಸೋಮವಾರವೂ 4 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಪ್ರಸ್ತುತ ಭಾರತದಲ್ಲಿ ‘ಧುರಂಧರ್ 2’, ‘ಬಾರ್ಡರ್ 2’ ಹಾಗೂ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳ ನಂತರ ಈ ವರ್ಷದ 4ನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಹನುಮಾನ್ ಅಂಶ್ ನಿರ್ಮಿಸಿದ 21ರ ಹರೆಯದ ಅನುಪ್ರಿಯಾಗೆ ಸಿಕ್ಕ ಲಾಭ ಎಷ್ಟು?
ನೀಮ್ ಕರೋಲಿ ಬಾಬಾ ಬಯೋಪಿಕ್:
ವಿಶಾಲ್ ಚತುರ್ವೇದಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹನುಮಾನ್ ಅಂಶ್’ ಚಿತ್ರವು ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಕಥೆಯಾಗಿದೆ. ತಾಯಿಯ ಅಗಲಿಕೆಯ ನಂತರ ಲಕ್ಷ್ಮೀನಾರಾಯಣ ಎಂಬ ಯುವಕ ಆಧ್ಯಾತ್ಮಿಕ ಹಾದಿ ಹಿಡಿದು, ಮುಂದೆ ನೀಮ್ ಕರೋಲಿ ಬಾಬಾ ಆಗಿ ಬೆಳೆಯುವ ರೋಚಕ ಪಯಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಶೋಭಿನವ್ ಸತ್ಯಾ ಅವರು ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಜೀವಿಸಿದ್ದು, ವಿಹಾನ್ ಶೇಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಹಾಗೂ ಭಗವಾನ್‌ದಾಸ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




