‘ಹನುಮಾನ್ ಅಂಶ್’ ನಿರ್ಮಿಸಿದ 21ರ ಹರೆಯದ ಅನುಪ್ರಿಯಾಗೆ ಸಿಕ್ಕ ಲಾಭ ಎಷ್ಟು?
ಯುಕೆಯಲ್ಲಿ ಅರ್ಥಶಾಸ್ತ್ರ ಓದಿ ಜ್ಯೂರಿಚ್‌ನ ಐಷಾರಾಮಿ ಉದ್ಯೋಗ ತೊರೆದ 21 ವರ್ಷದ ಅನುಪ್ರಿಯಾ ನಾಗರ್, ನೀಮ್ ಕರೋಲಿ ಬಾಬಾ ಜೀವನಾಧಾರಿತ 'ಹನುಮಾನ್ ಅಂಶ' ಸಿನಿಮಾದಲ್ಲಿ 50 ಲಕ್ಷ ಹೂಡಿಕೆ ಮಾಡಿ 50 ಕೋಟಿ ಲಾಭ ಗಳಿಸುವ ಮೂಲಕ ಅವರು ದೊಡ್ಡ ಲಾಭ ಕಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಯುಕೆಯಲ್ಲಿ ಅರ್ಥಶಾಸ್ತ್ರ ವ್ಯಾಸಂಗ ಮುಗಿಸಿದ 21 ವರ್ಷದ ಅನುಪ್ರಿಯಾ ನಾಗರ್ ಅವರಿಗೆ ಜ್ಯೂರಿಚ್‌ನಲ್ಲಿ ಕೋಟಿ ರೂ. ಸಂಬಳದ ಕೆಲಸ ಸಿಕ್ಕಿತ್ತು. ಆದರೆ, ಭಾರತೀಯ ಆಧ್ಯಾತ್ಮ ಮತ್ತು ಧರ್ಮದ ಮೌಲ್ಯಗಳನ್ನು ಜಗತ್ತಿಗೆ ಸಾರುವ ದೊಡ್ಡ ಕನಸು ಅವರಲ್ಲಿತ್ತು. ಹೀಗಾಗಿ ಉದ್ಯೋಗ ತೊರೆದು ಭಾರತಕ್ಕೆ ಮರಳಿದರು. ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿ ತೆರೆಕಂಡ ‘ಹನುಮಾನ್ ಅಂಶ್’ ಚಿತ್ರಕ್ಕೆ ನಿರ್ಮಾಪಕಿಯಾಗಿ ಕೋಟ್ಯಂತರ ರೂಪಾಯಿ ಗಳಿಸಿ ಸೈ ಎನಿಸಿಕೊಂಡಿದ್ದಾರೆ.
ಅನುಪ್ರಿಯಾ ಅವರ ವಿದೇಶಿ ವ್ಯಾಸಂಗದ ವೇಳೆ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹಾಗೂ ಮಾರ್ಕ್ ಜುಕರ್‌ಬರ್ಗ್ ಕುರಿತು ಸಂಶೋಧನೆ ನಡೆಸಿದ್ದರು. ಈ ವೇಳೆ ಅವರು ಕೈಂಚಿ ಧಾಮಕ್ಕೆ ಭೇಟಿ ನೀಡಿದ್ದ ವಿಷಯ ತಿಳಿದು ಆಶ್ಚರ್ಯಪಟ್ಟರು. ವಿದೇಶಿಗರು ನಮ್ಮ ದೇಶದ ಸಂತನನ್ನು ಆರಾಧಿಸುವಾಗ ನಾವೇಕೆ ಅವರ ಕಥೆಯನ್ನು ಜನರಿಗೆ ತಲುಪಿಸಬಾರದು ಎಂಬ ಆಲೋಚನೆ ಮೂಡಿತು. ಈ ಆಲೋಚನೆಯೇ ಅವರನ್ನು ‘ಹನುಮಾನ್ ಅಂಶ್’ ಚಿತ್ರತಂಡದತ್ತ ಕರೆತಂದಿತು.
ಚಿತ್ರದ ಕಥೆ ಓದಿದ ಅನುಪ್ರಿಯಾ ತಕ್ಷಣವೇ ಈ ಯೋಜನೆಗೆ ಬೆಂಬಲ ನೀಡಲು ನಿರ್ಧರಿಸಿದರು. 2 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರಕ್ಕೆ ತಮ್ಮ ಉಳಿತಾಯದ 50 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದರು. ಈ ಹೂಡಿಕೆಯಿಂದ ಬರುವ ಒಟ್ಟು ಲಾಭದಲ್ಲಿ ಅವರಿಗೆ ನಾಲ್ಕನೇ ಒಂದು ಭಾಗದಷ್ಟು ಪಾಲು ಸಿಗಲಿದೆ. ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಾಣುತ್ತಿದೆ.
ಇದೇ ವೇಳೆ ಬಾಲಿವುಡ್‌ನ ‘ರಾಮಾಯಣ’ ಚಿತ್ರದ ಬಗ್ಗೆಯೂ ಅನುಪ್ರಿಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೇವಲ ಮಾಂಸಹಾರ ತ್ಯಜಿಸುವುದರಿಂದ ಅಥವಾ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದರಿಂದ ಭಕ್ತಿಚಿತ್ರಗಳು ಯಶಸ್ವಿಯಾಗುವುದಿಲ್ಲ. ನಟರಲ್ಲಿ ಆಂತರಿಕ ಶ್ರದ್ಧೆ ಹಾಗೂ ನಮ್ರತೆ ಇರಬೇಕು. ಓಂ ರಾವತ್ ಅವರ ‘ಆದಿಪುರುಷ್’ ಚಿತ್ರದಲ್ಲಿ ಅತಿಯಾದ ಗ್ರಾಫಿಕ್ಸ್ ಇದ್ದ ಕಾರಣ ತಮಗೆ ಕನೆಕ್ಟ್ ಆಗಲಿಲ್ಲ ಎಂದು ನೇರವಾಗಿ ಹೇಳಿದರು.
ಇದನ್ನೂ ಓದಿ: ‘ಹನುಮಾನ್ ಅಂಶ್ ಚಿತ್ರಕ್ಕೆ ನೋ ಎಂದ ನಿರ್ಮಾಪಕರು ಕ್ಷಮೆ ಕೇಳುತ್ತಿದ್ದಾರೆ’; ಅನುಪ್ರಿಯಾ
‘ಹನುಮಾನ್ ಅಂಶ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಡೀ ತಂಡ ಹನುಮಾನ್ ಚಾಲೀಸಾ ಪಠಿಸುತ್ತಿತ್ತು. ಇಂತಹ ಆಧ್ಯಾತ್ಮಿಕ ಶ್ರದ್ಧೆಯೇ ತಮ್ಮ ಸಿನಿಮಾದ ದೊಡ್ಡ ಯಶಸ್ಸಿಗೆ ಕಾರಣವಾಯಿತು. ವಿದೇಶದ ಐಷಾರಾಮಿ ಜೀವನ ತೊರೆದು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತಲುಪಿಸಿದ ಅನುಪ್ರಿಯಾ ಅವರ ಸಾಧನೆಗೆ ಈಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಧ್ಯಾತ್ಮ ಮತ್ತು ಸಿನಿಮಾ ಕ್ಷೇತ್ರದ ಮೇಲಿನ ಅವರ ಆಸಕ್ತಿ ಯುವಜನತೆಗೆ ಮಾದರಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:19 am, Fri, 25 September 26




