ಈ ವರ್ಷದ ಬಹುನಿರೀಕ್ಷಿಯ ಸಿನಿಮಾಗಳ ಪಟ್ಟಿಯಲ್ಲಿ ಹಿಂದಿಯ ‘ವಿಕ್ರಮ್ ವೇದ’ ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ (Hrithik Roshan) ನಟಿಸುತ್ತಿದ್ದಾರೆ. ಪುಷ್ಕರ್-ಗಾಯತ್ರಿ ನಿರ್ದೇಶನದ ಈ ಸಿನಿಮಾದ ಟೀಸರ್ ಈಗ ಬಿಡುಗಡೆ ಆಗಿದೆ. ಟೀಸರ್ (Vikram Vedha Teaser) ನೋಡಿದ ಎಲ್ಲರಿಗೂ ಸಖತ್ ಕೌತುಕ ಮೂಡಿದೆ. ಖಡಕ್ ಆದಂತಹ ಡೈಲಾಗ್ಗಳ ಮೂಲಕ ಹೃತಿಕ್ ರೋಷನ್ ಗಮನ ಸೆಳೆದಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಸಿನಿಮಾದ ಟೀಸರ್ 13 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಪ್ರೇಕ್ಷಕರಿಗೆ ಈ ಚಿತ್ರದ ಮೇಲೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಸೆಪ್ಟೆಂಬರ್ 30ರಂದು ‘ವಿಕ್ರಮ್ ವೇದ’ (Vikram Vedha) ಸಿನಿಮಾ ಬಿಡುಗಡೆ ಆಗಲಿದೆ.
ಎಲ್ಲರಿಗೂ ತಿಳಿದಿರುವಂತೆ ಇದು ತಮಿಳಿನ ‘ವಿಕ್ರಮ್ ವೇದ’ ಸಿನಿಮಾದ ಹಿಂದಿ ರಿಮೇಕ್. ಮೂಲ ಹೆಸರನ್ನೇ ಇಟ್ಟುಕೊಂಡು ರಿಮೇಕ್ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರೆ, ಗ್ಯಾಂಗ್ಸ್ಟರ್ ಆಗಿ ಹೃತಿಕ್ ರೋಷನ್ ಮನರಂಜನೆ ನೀಡಲಿದ್ದಾರೆ. ಇಬ್ಬರ ನಡುವೆ ಈ ಸಿನಿಮಾದಲ್ಲಿ ಹಲವು ಮುಖಾಮುಖಿ ದೃಶ್ಯಗಳು ಇರಲಿವೆ. ಭರ್ಜರಿ ಸಾಹಸ ಸನ್ನಿವೇಶಗಳು ಕೂಡ ಇವೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ಸಿಕ್ಕಿದೆ. ರಗಡ್ ಗೆಟಪ್ನಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದಾರೆ.
‘ನಿಮಗೊಂದು ಕಥೆ ಹೇಳಲೇ? ಕಾಳಜಿ ಮತ್ತು ತಾಳ್ಮೆ ಇಟ್ಟುಕೊಂಡು ಇದನ್ನು ಕೇಳಿ. ಈ ಬಾರಿ ಬರೀ ಮನರಂಜನೆ ಮಾತ್ರವಲ್ಲ, ಅಚ್ಚರಿ ಕೂಡ ಇರಲಿದೆ’ ಎಂಬ ಸಂಭಾಷಣೆಯೊಂದಿಗೆ ಟೀಸರ್ ಆರಂಭ ಆಗುತ್ತದೆ. 1 ನಿಮಿಷ 54 ಸೆಕೆಂಡ್ಗಳ ಟೀಸರ್ನಲ್ಲಿ ಹಲವು ಅಂಶಗಳನ್ನು ರಿವೀಲ್ ಮಾಡಲಾಗಿದೆ. ‘ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಆಯ್ಕೆ ಮಾಡುವುದು ತುಂಬ ಸುಲಭ ಸರ್. ಆದರೆ ಈ ಕಥೆಯಲ್ಲಿ ಇಬ್ಬರೂ ಕೆಟ್ಟವರು’ ಎಂದು ಹೃತಿಕ್ ರೋಷನ್ ಹೇಳಿರುವ ಡೈಲಾಗ್ ಹೆಚ್ಚು ಹೈಲೈಟ್ ಆಗಿದೆ. ಆ ಮೂಲಕ ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೌತುಕ ಮೂಡಿಸಲು ಈ ಟೀಸರ್ ಯಶಸ್ವಿ ಆಗಿದೆ.
एक कहानी सुनाएँ? #VikramVedhaTeaser OUT NOW https://t.co/mqDWKIGq8T#VikramVedha releasing in cinemas worldwide on 30th September 2022.#SaifAliKhan @PushkarGayatri pic.twitter.com/DeIj6qMfC4
— Hrithik Roshan (@iHrithik) August 24, 2022
ಸದ್ಯಕ್ಕೆ ಬಾಲಿವುಡ್ ಪರಿಸ್ಥಿತಿ ಚಿಂತಾಜನಕ ಆಗಿದೆ. ಯಾವುದೇ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ‘ವಿಕ್ರಮ್ ವೇದ’ ಮೂಲಕವಾದರೂ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಕೆ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಟೀಸರ್ ನೋಡಿದ ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.