ಗಣೇಶನಿಗೆ ಕೈ ಮುಗಿದ ಸೈಫ್ ಅಲಿ ಖಾನ್ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್
ಸೈಫ್ ಅಲಿ ಖಾನ್-ಕರೀನಾ ಕಪೂರ್ ಕುಟುಂಬದವರು ಗಣೇಶ ವಿಗ್ರಹಕ್ಕೆ ಅಲಂಕಾರ ಮಾಡಿ ಕೈ ಮುಗಿದಿದ್ದಾರೆ. ಸೈಫ್ ಮತ್ತು ಅವರ ಪುತ್ರ ತೈಮೂರ್ ಅಲಿ ಖಾನ್ ಗಣಪತಿಗೆ ನಮಿಸುತ್ತಿರುವ ಫೋಟೋ ವೈರಲ್ ಆಗಿದೆ.
ನಟ ಸೈಫ್ ಅಲಿ ಖಾನ್ ಅವರನ್ನು ಆಗಾಗ ವಿವಾದಗಳು ಮುತ್ತಿಕೊಳ್ಳುತ್ತವೆ. ಅದರಲ್ಲೂ ದೇವರು ಮತ್ತು ಧರ್ಮದ ವಿಚಾರದಲ್ಲಿ ಅವರು ಏನೇ ಮಾಡಿದರೂ ಅದಕ್ಕೆ ಜನರು ಕೊಂಕು ನುಡಿಯುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಮುಸ್ಲಿಂ ಆಗಿರುವ ಸೈಫ್ ಅಲಿ ಖಾನ್ ಅವರು ಹಿಂದೂ ಮಹಿಳೆ ಕರೀನಾ ಕಪೂರ್ ಜೊತೆ ಮದುವೆ ಆದ ದಿನದಿಂದಲೂ ಅವರು ಟ್ರೋಲ್ ಕಾಟಕ್ಕೆ ತುತ್ತಾಗುತ್ತಲೇ ಇದ್ದಾರೆ. ಈಗ ಅವರು ಒಂದು ವರ್ಗದ ಮುಸ್ಲೀಮರ ಕೋಪಕ್ಕೆ ಗುರಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಕರೀನಾ ಹಂಚಿಕೊಂಡಿರುವ ಹೊಸ ಫೋಟೋಗಳು!
ಸೆ.10ರಂದು ಎಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗಿದೆ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿತ್ತು. ಗಣೇಶ ವಿಗ್ರಹಕ್ಕೆ ಅಲಂಕಾರ ಮಾಡಿ, ಕುಟುಂಬದವರೆಲ್ಲ ಕೈ ಮುಗಿದಿದ್ದಾರೆ. ಸೈಫ್ ಮತ್ತು ಅವರ ಪುತ್ರ ತೈಮೂರ್ ಅಲಿ ಖಾನ್ ಕೂಡ ಗಣಪತಿಗೆ ನಮಿಸುತ್ತಿರುವ ಫೋಟೋವನ್ನು ಕರೀನಾ ಕಪೂರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದನ್ನು ಕಂಡ ಕೆಲವರು ಕೆಂಡಾಮಂಡಲ ಆಗಿದ್ದಾರೆ.
ಮುಸ್ಲಿಂ ಆಗಿರುವ ವ್ಯಕ್ತಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಇದೇ ರೀತಿ ಕರೀನಾ ಕೂಡ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ಮಾಡುತ್ತಾರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸದ್ಯ ಈ ಯಾವ ಕಮೆಂಟ್ಗಳಿಗೂ ಸೈಫ್-ಕರೀನಾ ದಂಪತಿ ಉತ್ತರ ಕೊಡುವ ಗೋಜಿಗೆ ಕೈ ಹಾಕಿಲ್ಲ. ಕೆಲವರು ಸೈಫ್ಗೆ ಬೆಂಬಲ ನೀಡಿದ್ದಾರೆ. ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಅಲಿ ಖಾನ್ಗೆ ಮುಸ್ಲಿಂ ಪದ್ದತಿಯ ರೀತಿ ಸೈಫ್-ಕರೀನಾ ದಂಪತಿ ಹೆಸರು ಇಟ್ಟಿದ್ದಾರೆ. ಆ ಕಾರಣಕ್ಕೂ ಅವರು ಟ್ರೋಲ್ಗೆ ಒಳಗಾಗಿದ್ದುಂಟು.
View this post on Instagram
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೈಫ್ ಕೆಲವು ಮಾತುಗಳನ್ನು ಹಂಚಿಕೊಂಡಿದ್ದರು. ‘ದೇವರು ಇದ್ದಾನೋ ಇಲ್ಲವೋ ಎಂಬ ಬಗ್ಗೆ ನನಗೆ ನಿಖರತೆ ಇಲ್ಲ. ನನಗೆ ಅಧ್ಯಾತ್ಮದ ಬಗ್ಗೆ ಒಲವು ಇದೆ. ಆದರೆ ನಾನು ಹೆಚ್ಚು ಧಾರ್ಮಿಕ ವ್ಯಕ್ತಿ ಅಲ್ಲ’ ಎಂದು ಅವರು ಹೇಳಿಕೊಂಡಿದ್ದರು. ಸದ್ಯ ಸೈಫ್ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಆದಿಪುರುಷ್’, ‘ಭೂತ್ ಪೊಲೀಸ್’ ಮುಂತಾದ ಚಿತ್ರಗಳ ಮೂಲಕ ಜನರನ್ನು ರಂಜಿಸಲು ಅವರು ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ:
ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್ ಅಲಿ ಖಾನ್; ಈ ಪೋಸ್ಟರ್ನಲ್ಲಿ ಇರುವ ವಿವಾದ ಏನು?
‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್ ಅಲಿ ಖಾನ್