Raavan Leela: ರಾಮಾಯಣಕ್ಕೆ ಪ್ರಶ್ನೆ ಎಸೆಯುವ ‘ರಾವಣ್ ಲೀಲಾ’; ಸ್ಕ್ಯಾಮ್ ಹೀರೋ ಜೊತೆ ವಿವಾದ ಎಬ್ಬಿಸ್ತಾರಾ ಐಂದ್ರಿತಾ?
Pratik Gandhi | Aindrita Ray: ಸೀತೆ ಪಾತ್ರಧಾರಿಯಾಗಿ ಐಂದ್ರಿತಾ ರೇ ನಟಿಸಿದ್ದಾರೆ. ರಾವಣನ ಪಾತ್ರಧಾರಿಯಾಗಿ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಚಿಗುರುವ ಕುರಿತು ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ.
ಪೌರಾಣಿಕ ಕಥೆಗಳನ್ನು ಆಧರಿಸಿ ಸಿನಿಮಾ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅದೇ ರೀತಿ ಸಿನಿಮಾಗಳಲ್ಲಿ ದೇವರ ಉಲ್ಲೇಖ ಇದ್ದರೆ ನಿರ್ದೇಶಕರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕಾಂಟ್ರವರ್ಸಿ ಆಗುವುದು ಗ್ಯಾರಂಟಿ. ಈಗ ‘ರಾವಣ್ ಲೀಲಾ’ ಹಿಂದಿ ಸಿನಿಮಾ ಕೂಡ ಅಂಥ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ‘ರಾವಣ್ ಲೀಲಾ’ ಸಿನಿಮಾದಲ್ಲಿ ಕನ್ನಡದ ನಟಿ ಐಂದ್ರಿತಾ ರೇ ನಟಿಸಿದ್ದಾರೆ. ಅವರ ಜೊತೆ ‘ಸ್ಕ್ಯಾಮ್ 1992’ ಖ್ಯಾತಿಯ ಪ್ರತೀಕ್ ಗಾಂಧಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ.
‘ರಾಮಾಯಣ’ ನಾಟಕ ಮಾಡುವ ಒಂದು ತಂಡದ ಕುರಿತ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದು ಈ ಟ್ರೇಲರ್ ನೋಡಿದರೆ ಸ್ಪಷ್ಟವಾಗುತ್ತದೆ. ಸೀತೆ ಪಾತ್ರಧಾರಿಯಾಗಿ ಐಂದ್ರಿತಾ ರೇ ನಟಿಸಿದ್ದಾರೆ. ರಾವಣನ ಪಾತ್ರಧಾರಿಯಾಗಿ ಪ್ರತೀಕ್ ಗಾಂಧಿ ಅಭಿನಯಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಚಿಗುರುವ ಕುರಿತು ಕೂಡ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ. ಆ ಕಾರಣದಿಂದ ‘ರಾವಣ್ ಲೀಲಾ’ ಸಿನಿಮಾ ವಿವಾದ ಮಾಡಿಕೊಂಡರೂ ಅಚ್ಚರಿ ಏನಿಲ್ಲ.
ಗಣೇಶ ಹಬ್ಬದ ಪ್ರಯುಕ್ತ ಸೆ.9ರಂದು ‘ರಾವಣ್ ಲೀಲಾ’ ಟ್ರೇಲರ್ ಬಿಡುಗಡೆ ಆಗಿದೆ. ಒಂದು ದಿನ ಕಳೆಯುವುದರೊಳಗೆ ಯೂಟ್ಯೂಬ್ನಲ್ಲಿ 19 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾ ಮೂಲಕ ಐಂದ್ರಿತಾ ರೇ ಅವರಿಗೆ ಬಾಲಿವುಡ್ನಲ್ಲಿ ಸಖತ್ ಮೈಲೇಜ್ ಸಿಗುವ ಸಾಧ್ಯತೆ ಇದೆ. ‘ಸ್ಕ್ಯಾಮ್ 1992’ ವೆಬ್ ಸಿರೀಸ್ನಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ನಟ ಪ್ರತೀಕ್ ಗಾಂಧಿ ಅವರಿಗೆ ಇದು ಮೊದಲ ಬಾಲಿವುಡ್ ಸಿನಿಮಾ. ಆ ಕಾರಣದಿಂದಲೂ ಅಭಿಮಾನಿಗಳ ವಲಯದಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.
(ರಾವಣ್ ಲೀಲಾ ಟ್ರೇಲರ್)
ರಾಮಾಯಣದ ಕೆಲವು ನಂಬಿಕೆಗಳನ್ನು ಈ ಸಿನಿಮಾ ಪ್ರಶ್ನೆ ಮಾಡುವಂತಿದೆ. ಆ ಬಗ್ಗೆಯೂ ಟ್ರೇಲರ್ನಲ್ಲಿ ಝಲಕ್ ನೀಡಲಾಗಿದೆ. ‘ನೀವು ನಮ್ಮ ತಂಗಿಯನ್ನು ಅಪಮಾನಿಸಿದಿರಿ. ಅದಕ್ಕೆ ನಾವು ನಿಮ್ಮ ಪತ್ನಿಯನ್ನು ಅಪಹರಿಸಿದೆವು. ಆದರೆ ನಿಮ್ಮ ಥರ ನಾವು ಮೂಗು ಕತ್ತರಿಸಲಿಲ್ಲ. ಆದರೂ ನಮ್ಮ ಲಂಕೆ ಸುಟ್ಟುಹೋಯಿತು. ನಮ್ಮ ಮಕ್ಕಳು-ಸಹೋದರರ ಹತ್ಯೆ ಆಯಿತು. ಆದರೆ ನಿಮಗೆ ಮಾತ್ರ ಜೈಕಾರ ಯಾಕೆ?’ ಎಂದು ರಾಮನ ಪಾತ್ರಧಾರಿಗೆ ರಾವಣ ಪಾತ್ರಧಾರಿ ಪ್ರಶ್ನೆ ಮಾಡುವ ಒಂದು ದೃಶ್ಯ ಈ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ.
ಇದನ್ನೂ ಓದಿ:
3D ರಾಮಾಯಣ: ರಾಮನ ಪಾತ್ರಕ್ಕೆ ಮಹೇಶ್ ಬಾಬು ಬದಲಿಗೆ ರಣಬೀರ್ ಕಪೂರ್?
‘ಐಂದ್ರಿತಾ ದಂಪತಿ ನೆರೆ‘ಹೊರೆ’ಯವರೇ! ಜೋರು ಧ್ವನಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು’
Published On - 12:03 pm, Fri, 10 September 21