‘ದೋಸೆ’, ‘ದೋಸಾ’ ‘ಡೋಸಾ’ ಚರ್ಚೆ ಹುಟ್ಟುಹಾಕಿದ ನಟಿ ನೀನಾ ಗುಪ್ತಾ ವಿಡಿಯೋ
Neena Gupta: ಉತ್ತರ ಭಾರತದವರು ನಮ್ಮ ದೋಸೆಯನ್ನು ಡೋಸಾ ಎಂದು ಅಪ್ರಭಂಶಗೊಳಿಸುವುದು ಸಾಮಾನ್ಯ, ಇದೀಗ ನಟಿ ನೀನಾ ಗುಪ್ತಾ ದೋಸೆ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ದೋಸೆ ಹೆಸರಿನ ಬಗ್ಗೆ ಆಸಕ್ತಿಕರ ಚರ್ಚೆ ನಡೆದಿದೆ.
ದೋಸೆಯ ಮೂಲ ಯಾವುದು? ಉಡುಪಿಯೊ, ತಮಿಳುನಾಡೊ ಎಂಬ ಬಗ್ಗೆ ನಿರ್ದಿಷ್ಟ ನಿಲುವಿಗೆ ಬರಲಾಗಿಲ್ಲ. ಹೀಗಿರುವಾಗ ನಮ್ಮ ದೋಸೆಯನ್ನು ಉತ್ತರ ಭಾರತದವರು ಡೋಸಾ ಎಂದು ಅಪ್ರಭಂಶ ಮಾಡುವ ಚಾಳಿ ದೋಸೆ ಪ್ರಿಯರು ಮಂಡೆ ಬೆಚ್ಚಗೆ ಮಾಡಿದೆ, ಮಾಡುತ್ತಲೇ ಇದೆ. ಹೀಗಿರುವಾಗ ಬಾಲಿವುಡ್ ನಟಿ ನೀನಾ ಗುಪ್ತಾ ಅವರ ವಿಡಿಯೋ ಒಂದು ಈ ಚರ್ಚೆಯ ಬಿಸಿ ಕಾವಲಿಗೆ ಇನ್ನಷ್ಟು ತುಪ್ಪ ಸುರಿದಿದೆ.
ಉತ್ತರ ಭಾರತೀಯರು ದಕ್ಷಿಣದ ಹೆಸರುಗಳನ್ನು ಅಪಭ್ರಂಶಗೊಳಿಸುವುದರ ಬಗ್ಗೆ ದಕ್ಷಿಣದ ಜನರಿಗೆ ಬಹಳ ಅಸಮಾಧಾನ. ದಕ್ಷಿಣದ ಜನಪ್ರಿಯ ಉಪಹಾರ ದೋಸೆಯನ್ನು ಡೋಸಾ ಎಂದಾಗಲಂತೂ ಕೇಳಿಕೊಂಡು ಸುಮ್ಮನಿಗಲಾರದೆ ಜಗಳವನ್ನೇ ಮಾಡಿದ ಉದಾಹರಣೆಗಳಿವೆ. ಇದೀಗ ನೀನಾ ಗುಪ್ತಾ ಅವರು ದೋಸೆ ತಿನ್ನುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ನೀನಾ ಗುಪ್ತಾ, ಬಹುಪಾಲು ಉತ್ತರ ಭಾರತದವರಂತೆ ಡೋಸಾ ಎನ್ನದೆ ಸರಿಯಾಗಿ ದೋಸೆ ಎಂದಿದ್ದಾರೆ. ಇದು ದಕ್ಷಿಣದ ದೋಸೆ ಪ್ರಿಯರ ಹೃದಯ ಗೆದ್ದಿದೆ. ಆದರೆ ವಿಡಿಯೋದಲ್ಲಿ ಅವರು ದೋಸೆ ಜೊತೆಗೆ ದೋಸಾ ಎಂದಿರುವುದು ಇನ್ನೊಂದು ಹೊಸ ಚರ್ಚೆಗೆ ನಾಂದಿ ಹಾಡಿದೆ.
ದೋಸೆ ತಿನ್ನುತ್ತಾ ನೀನಾ ಗುಪ್ತಾ ”ಇಡ್ಲಿ-ದೋಸೆಯಂಥಹಾ ಇನ್ನೊಂದು ತಿಂಡಿ ಜೀವನದಲ್ಲಿಲ್ಲ, ನಾನು ಎರಡನೇ ದೋಸಾ ತಿನ್ನುತ್ತಿದ್ದೇನೆ ಬಹಳ ದಿನಗಳ ನಂತರ” ಎಂದು ದೋಸೆ ಮುರಿದು ಬಾಯಿಗಿಟ್ಟಿದ್ದಾರೆ. ನಟಿ ದೋಸೆಯನ್ನು ಸರಿಯಾಗಿ ದೋಸೆ ಎಂದಿರುವುದನ್ನು ಕೆಲವರು ಕಮೆಂಟ್ನಲ್ಲಿ ಸಂಭ್ರಮಿಸಿದ್ದಾರೆ. ಜೊತೆಗೆ ಡೋಶಾ ಎನ್ನುವವರ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಅದೇ ವಿಡಿಯೋದಲ್ಲಿ ನೀನಾ ಗುಪ್ತಾ, ದೋಸಾ ಎಂದಿರುವ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ.
If Neena Gupta can pronounce Dosay correctly, what’s stopping you?
Queen for a reason ? pic.twitter.com/cijfXm9K45
— Anubha (@artbyahbuna) April 13, 2023
ವಿಡಿಯೋ ಹಂಚಿಕೊಂಡಿರುವ ಅನುಭಾ ಎಂಬವರು, ನೀನಾ ಗುಪ್ತಾ ಡೋಸಾ ಅಥವಾ ಡೋಶೆ ಎನ್ನದೆ ದ ಪದವನ್ನು ಸರಿಯಾಗಿ ಬಳಸಿದ್ದು ಖುಷಿಯಾಯಿತು ಎಂದಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬರು ಉತ್ತರ ಭಾರತದ ಹಲವು ಹೋಟೆಲ್ಗಳ ಮೆನು ಕಾರ್ಡ್ನಲ್ಲಿ ಅದನ್ನು ದೋಸಾ (Dosa) ಎಂದೇ ಬರೆದಿರುತ್ತಾರೆ ಹಾಗಾಗಿ ಉತ್ತರದವರಿಗೆ ಆ ಉಚ್ಛಾರಣೆ ಸಾಮಾನ್ಯ ಎಂದಿದ್ದಾರೆ. ಇದನ್ನು ಒಪ್ಪಿಕೊಂಡಿರುವ ವಿಡಿಯೋ ಹಂಚಿಕೊಂಡಿರುವ ಅನುಭಾ, ಅದು ನಿಜ ಆದರೆ ದೋಸಾ ಹಾಗೂ ಡೋಸಾಗೂ ಅಂತರವಿದೆ, ವಿಡಿಯೋ ಹಂಚಿಕೊಂಡಿರುವ ಉದ್ದೇಶ, ನೀನಾ ಗುಪ್ತಾ ಡ ಬದಲಿಗೆ ದ ಬಳಸಿದ್ದಾರೆ ಎಂಬುದು ಎಂದು ಸ್ಪಷ್ಟನೆ ನೀಡಿದ್ದಾರೆ. ಚರ್ಚೆಗಳೇನೇ ಇರಲಿ ದೋಸೆ ಗಡಿಗಳನ್ನು ದಾಟಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಮತಭೇದಗಳಿಲ್ಲದೆ, ವರ್ಣ ತಾರತಮ್ಯಗಳಿಲ್ಲದೆ ಕೋಟ್ಯಂತರ ಜನಗಳ ನಾಲಿಗೆ ರುಚಿ ತಣಿಸುತ್ತಿದೆ.
ನಟಿ ನೀನಾ ಗುಪ್ತಾ ಬಾಲಿವುಡ್ನ ಹಿರಿಯ ನಟಿ. 1982 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನೀನಾ ಗುಪ್ತಾ, ವೆಸ್ಟ್ ಇಂಡೀಸ್ನ ವೀವಿಯನ್ ರಿಚರ್ಡ್ಸ್ ಜೊತೆಗೆ ಪ್ರೇಮ ಸಂಬಂಧ ಹೊಂದಿ ಅವರಿಂದ ಮಸಾಬಾ ಹೆಸರಿನ ಹೆಣ್ಣು ಮಗು ಪಡೆದು ಸುದ್ದಿಯಾಗಿದ್ದರು. ಆ ಬಳಿಕ ನೀನಾ ಅವರು ವಿವೇಕ್ ಮೆಹ್ರಾ ಎಂಬುವರನ್ನು ವಿವಾಹವಾದರು. ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ಹಿಂದಿ ಸಿನಿಮಾ ಗುಡ್ ಬೈನಲ್ಲಿ ರಶ್ಮಿಕಾ ತಾಯಿಯ ಪಾತ್ರದಲ್ಲಿ ನೀನಾ ಗುಪ್ತಾ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ