‘ತನ್ವಿ ದಿ ಗ್ರೇಟ್’ ನೋಡಿ ಮೆಚ್ಚಿದ ಸೈನ್ಯಾಧಿಕಾರಿ ಜನರಲ್ ಉಪೇಂದ್ರ

Tanvi The Great: ಬಾಲಿವುಡ್​ನ ಖ್ಯಾತ ಮತ್ತು ಹಿರಿಯ ನಟ ಅನುಪಮ್ ಖೇರ್ ಅವರು ‘ತನ್ವಿ: ದಿ ಗ್ರೇಟ್’ ಹೆಸರಿನ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಆಟಿಸ್ಟಿಕ್ ಯುವತಿಯೊಬ್ಬಾಕೆ ಭಾರತೀಯ ಸೇನೆ ಸೇರುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾ ವೀಕ್ಷಿಸಿದ ಸೈನ್ಯಾಧಿಕಾರಿಗಳು, ಸೈನಿಕರ ಕುಟುಂಬಗಳು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿವೆ.

‘ತನ್ವಿ ದಿ ಗ್ರೇಟ್’ ನೋಡಿ ಮೆಚ್ಚಿದ ಸೈನ್ಯಾಧಿಕಾರಿ ಜನರಲ್ ಉಪೇಂದ್ರ
Tanvi The Great

Updated on: Jul 11, 2025 | 11:23 AM

ಬಾಲಿವುಡ್​ನಲ್ಲಿ (Bollywood) ಸೈನ್ಯದ ಸಾಹಸಗಳ ಬಗ್ಗೆ ಹಲವಾರು ಸಿನಿಮಾಗಳು ಈ ವರೆಗೆ ಬಂದಿವೆ. ಹೀಗೆ ಬಂದಿರುವ ಸಿನಿಮಾಗಳಲ್ಲಿ ಗೆದ್ದ ಸಿನಿಮಾಗಳೇ ಹೆಚ್ಚು. ಆರ್ಮಿ ಹಿನ್ನೆಲೆಯ ಕತೆಗಳುಳ್ಳ ಸಿನಿಮಾಗಳು ಜನರಿಗೆ ವಿಶೇಷವಾಗಿ ಉತ್ತರ ಭಾರತದ ಜನರಿಗೆ ಬಹಳ ಮೆಚ್ಚುಗೆ ಆಗುತ್ತವೆ. ಅದೇ ಸಾಲಿಗೆ ಸೇರುವ ಆದರೆ ಈ ಹಿಂದೆ ಸೈನ್ಯದ ಕುರಿತಾಗಿ ಬಂದ ಸಿನಿಮಾಗಳಲ್ಲಿಯೇ ಭಿನ್ನ ಎನ್ನಬಹುದಾದ ‘ತನ್ವಿ: ದಿ ಗ್ರೇಟ್’ ಹೆಸರಿನ ಸಿನಿಮಾ ಇದೀಗ ಬಿಡುಗಡೆ ರೆಡಿಯಾಗಿದ್ದು, ಪ್ರೀಮಿಯರ್ ಶೋನಲ್ಲಿ ಸಿನಿಮಾ ವೀಕ್ಷಿಸಿದ ಸೈನ್ಯಾಧಿಕಾರಿ ಜನರಲ್ ಉಪೇಂದ್ರ ದ್ವಿವೇದಿ ಅವರು ಸಿನಿಮಾ ಅನ್ನು ಕೊಂಡಾಡಿದ್ದಾರೆ.

ಹಿರಿಯ ನಟ ಅನುಪಮ್ ಖೇರ್ ನಟಿಸಿ, ನಿರ್ದೇಶನ ಮಾಡಿರುವ ‘ತನ್ವಿ: ದಿ ಗ್ರೇಟ್’ ಸಿನಿಮಾ ಆಟಿಸ್ಟಿಕ್ ಯುವತಿಯ ಕತೆಯನ್ನು ಒಳಗೊಂಡಿದೆ. ಆಟಿಸ್ಟಿಕ್ ಯುವತಿ, ತನ್ನ ತಂದೆಯ ಆಸೆ ಈಡೇರಿಸಲು ಹಲವು ಅಡೆತಡೆಗಳನ್ನು ದಾಟಿ ಸೈನ್ಯಕ್ಕೆ ಸೇರಲು ಮುಂದಾಗುವ ಕತೆ ಈ ಸಿನಿಮಾದ್ದು. ಆಟಿಸ್ಟಿಕ್ ಪರಿಸ್ಥಿತಿ ಉಳ್ಳವರು, ಸರಿಯಾಗಿ ಓಡಲು ಆಗದು, ಸ್ಪಷ್ಟವಾಗಿ ಭಾವನೆಗಳನ್ನು ವ್ಯಕ್ತಪಡಿಸಲಾಗದು, ಬೇಗನೆ ನಿರ್ಣಯ ತೆಗೆದುಕೊಳ್ಳಲು ಆಗದು ಇಂಥಹಾ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇವುಗಳೆಲ್ಲದರ ಬಳಿಕವೂ ಆಟಿಸ್ಟಿಕ್ ಯುವತಿಯೊಬ್ಬಾಕೆ ತನ್ನ ಸತತ ಶ್ರಮ, ಪರಿಶ್ರಮದಿಂದ ಹೇಗೆ ಸೈನ್ಯ ಸೇರುತ್ತಾಳೆ ಎಂಬುದೇ ‘ತನ್ವಿ: ದಿ ಗ್ರೇಟ್’ ಸಿನಿಮಾದ ಕತೆ.

ಸೈನ್ಯಾಧಿಕಾರಿಗಳು, ಸೈನಿಕರ ಕುಟುಂಬಕ್ಕಾಗಿ ಇತ್ತೀಚೆಗಷ್ಟೆ ‘ತನ್ವಿ: ದಿ ಗ್ರೇಟ್’ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ನವದೆಹಲಿಯ ಚಾಣಕ್ಯಪುರಿಯ ಪಿವಿಆರ್​​ನಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಸೈನ್ಯಾಧಿಕಾರಿಗಳು, ಸೇನಾ ಕುಟುಂಬದವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಜನರಲ್ ಉಪೇಂದ್ರ ದ್ವಿವೇದಿ ಅವರು ಇದೊಂದು ಖಂಡಿತ ನೋಡಬೇಕಾದ ಸಿನಿಮಾ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ:‘ಪಹಲ್ಗಾಮ್ ದಾಳಿ ಬಗ್ಗೆ ಇಲ್ಲಿ ನಾನು ಮಾತಾಡಲ್ಲ’: ಅನುಪಮ್ ಖೇರ್ ಹೀಗೆ ಹೇಳಿದ್ದೇಕೆ?

ವಿಶೇಷ ಸ್ಕ್ರೀನಿಂಗ್ ಬಳಿಕ ಮಾತನಾಡಿದ ಅನುಪಮ್ ಖೇರ್, ‘ಹಲವು ವರ್ಷಗಳಿಂದಲೂ ನನಗೆ ಸೇನೆಯ ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ. ನಾನು ಸೇನೆಯ ಮೇಲೆ ಇರಿಸಿರುವ ಪ್ರೀತಿಗೆ ಧ್ಯೋತಕವಾಗಿ ಈ ಸಿನಿಮಾ ಮಾಡಿದ್ದೇನೆ. ಈ ಸಿನಿಮಾವನ್ನು ನಾನು ಎಲ್ಲ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇನೆ. ನನ್ನ 40 ವರ್ಷದ ಸಿನಿಮಾ ವೃತ್ತಿ ಜೀವನದಲ್ಲಿ ಈ ಸಿನಿಮಾದ ಈ ವಿಶೇಷ ಸ್ಕ್ರೀನಿಂಗ್ ನನ್ನ ಪಾಲಿಗೆ ಅತ್ಯಂತ ಮಹತ್ವವಾದುದು’ ಎಂದಿದ್ದಾರೆ ಖೇರ್.

‘ತನ್ವಿ ದಿ ಗ್ರೇಟ್’ ಸಿನಿಮಾದ ಪ್ರಮುಖ ಪಾತ್ರವಾದ ಆಟಿಸ್ಟಿಕ್ ಯುವತಿಯ ಪಾತ್ರದಲ್ಲಿ ಶುಭಾಂಗಿ ನಟಿಸಿದ್ದಾರೆ. ಆಟಿಸ್ಟಿಕ್ ಯುವತಿಯ ತಾತನ ಪಾತ್ರದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಸಿನಿಮಾನಲ್ಲಿ ಬೊಮನ್ ಇರಾನಿ, ಜಾಕಿ ಶ್ರಾಫ್, ತಮಿಳಿನ ಸ್ಟಾರ್ ನಟ ಅರವಿಂದ ಸ್ವಾಮಿ ಸಹ ಇದ್ದಾರೆ. ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣವನ್ನು ಅನುಪಮ್ ಖೇರ್ ಮಾಡಿದ್ದಾರೆ. ಸಿನಿಮಾ ಜುಲೈ 18 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Fri, 11 July 25