‘ಪಹಲ್ಗಾಮ್ ದಾಳಿ ಬಗ್ಗೆ ಇಲ್ಲಿ ನಾನು ಮಾತಾಡಲ್ಲ’: ಅನುಪಮ್ ಖೇರ್ ಹೀಗೆ ಹೇಳಿದ್ದೇಕೆ?
ಅನುಪಮ್ ಖೇರ್ ನಿರ್ದೇಶನ ಮಾಡಿರುವ ‘ತನ್ವಿ: ದಿ ಗ್ರೇಟ್’ ಸಿನಿಮಾದ ಸುದ್ದಿಗೋಷ್ಠಿ ಮುಂಬೈನಲ್ಲಿ ನಡೆದಿದೆ. ಆದರೆ ಈ ಸುದ್ದಿಗೋಷ್ಠಿಯಲ್ಲಿ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಮಾತನಾಡಲು ಅನುಪಮ್ ಖೇರ್ ಅವರು ನಿರಾಕರಿಸಿದ್ದಾರೆ. ತಮ್ಮ ಈ ನಿಲುವಿಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಟ ಅನುಪಮ್ ಖೇರ್ (Anupam Kher) ಅವರು ಸಿನಿಮಾ ಮಾತ್ರವಲ್ಲದೇ ಅನೇಕ ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ ಇರುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ (Pahalgam Terror Attack) ನಡೆಯಿತು. ಆ ಕುರಿತು ಸುದ್ದಿಗೋಷ್ಠಿಯಲ್ಲಿ ಅನುಪಮ್ ಖೇರ್ ಅವರಿಗೆ ಪ್ರಶ್ನೆ ಕೇಳಲಾಯಿತು. ಆದರೆ ಆ ಬಗ್ಗೆ ಮಾತನಾಡುವುದಿಲ್ಲ ಎಂದು ಅನುಪಮ್ ಖೇರ್ ಹೇಳಿದ್ದಾರೆ. ಅವರು ಆ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಕೂಡ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
‘ತನ್ವಿ: ದಿ ಗ್ರೇಟ್’ ಸಿನಿಮಾಗೆ ಅನುಪಮ್ ಖೇರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಅವರು ಹೊಸ ನಟಿಯನ್ನು ಪರಿಚಯಿಸುತ್ತಿದ್ದಾರೆ. ಅದರ ಸಲುವಾಗಿ ಇಂದು (ಏಪ್ರಿಲ್ 28) ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿ ನಟಿ ಶುಭಾಂಗಿ ಅವರನ್ನು ಅನುಪಮ್ ಖೇರ್ ಪರಿಚಯಿಸಿದರು. ಇದೇ ವೇಳೆ ಅವರಿಗೆ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರಶ್ನೆ ಕೇಳಲಾಯಿತು.
‘ಕಾಶ್ಮೀರದಲ್ಲಿ ಆಗಿರುವ ಘಟನೆ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ಯಾಕೆಂದರೆ, ಅದು ತುಂಬ ಮಹತ್ವದ ವಿಷಯ. ಅದಕ್ಕಾಗಿಯೇ ನಾನು ಮೌನಾಚರಣೆ ಮಾಡಿದ್ದೇನೆ. ಆ ವಿಷಯ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಅಂಥ ಗಂಭೀರವಾದ ವಿಚಾರವನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ಸರಿಯಲ್ಲ. ಈಗಾಗಲೇ ನಾನು ಅದರ ಬಗ್ಗೆ 5 ನಿಮಿಷ ವಿಡಿಯೋ ಮಾಡಿದ್ದೇನೆ’ ಎಂದು ಅನುಪಮ್ ಖೇರ್ ಅವರು ಹೇಳಿದ್ದಾರೆ.
ವಿಡಿಯೋ ಮೂಲಕ ಅನುಮಪ್ ಖೇರ್ ಅವರು ಪಹಲ್ಗಾಮ್ ಘಟನೆ ಬಗ್ಗೆ ಮಾತನಾಡಿದ್ದರು. ‘ಕಾಶ್ಮೀರದಲ್ಲಿ ಆದ ಹಿಂದೂಗಳ ಹತ್ಯಾಕಾಂಡದಿಂದ ತೀವ್ರ ನೋವಾಗಿದೆ. ಜೀವನದುದ್ದಕ್ಕೂ ನಾನು ಇಂಥದ್ದನ್ನೇ ನೋಡಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ತೋರಿಸಿದ್ದು ಸಣ್ಣ ತುಣುಕು ಅಷ್ಟೇ. ಅದನ್ನು ಹಲವರು ಪ್ರಾಪಗಾಂಡ ಎಂದಿದ್ದರು. ಆದರೆ ಈಗ ಭಾರತದ ಬೇರೆ ಬೇರೆ ಭಾಗದಿಂದ ಕಾಶ್ಮೀರಕ್ಕೆ ಬಂದಿದ್ದ ಜನರ ಧರ್ಮವನ್ನು ಗುರುತಿಸಿ ಕೊಲ್ಲಲಾಗಿದೆ’ ಎಂದು ಅನುಪಮ್ ಖೇರ್ ಹೇಳಿದ್ದರು.
ಇದನ್ನೂ ಓದಿ: 70ನೇ ವಯಸ್ಸಿಗೆ ಕಾಲಿಟ್ಟ ಅನುಪಮ್ ಖೇರ್; ಇವರ ಫಿಟ್ನೆಸ್ ಗುಟ್ಟು ಇದೇ
‘ಗಂಡನ ಶವದ ಪಕ್ಕ ಕುಳಿತು ಅಳುತ್ತಿದ್ದ ಮಹಿಳೆಯ ಚಿತ್ರವನ್ನು ನಾನು ಮರೆಯಲು ಸಾಧ್ಯವಿಲ್ಲ. ಪಲ್ಲವಿ ನೀಡಿದ ಸಂದರ್ಶನ ಕೇಳಿದೆ. ತನ್ನನ್ನೂ ಸಾಯಿಸಿ ಅಂತ ಆಕೆ ಕೇಳಿಕೊಂಡಿದ್ದರು. ಆದರೆ ಸಂದೇಶ ತಿಳಿಸು ಅಂತ ಆಕೆಯನ್ನು ಬಿಟ್ಟು ಕಳಿಸಿದರು. ಇದು ತುಂಬ ಕ್ರೂರ ಕೃತ್ಯ’ ಎಂದು ಅನುಮಪ್ ಖೇರ್ ಅವರು ವಿಡಿಯೋದಲ್ಲಿ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








