ನಟ ಸೋನು ಸೂದ್ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ್ದ ಸರ್ವೆ ನಿನ್ನೆ ರಾತ್ರಿ ಕೊನೆಗೊಂಡಿತ್ತು. ಇಂದು ಬೆಳಗ್ಗೆ ಅಧಿಕಾರಿಗಳು ಸೋನು ಅವರ ಮನೆಗೆ ತೆರಳಿದ್ದು, ಅಲ್ಲಿ ಸರ್ವೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಕ್ನೋ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದಿಗಿನ ಆಸ್ತಿ ಒಪ್ಪಂದದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಧಿಕಾರಿಗಳು ನಿನ್ನೆ ಜುಹುವಿನ ಮನೆಯಲ್ಲಿರುವ ಸೋನು ಅವರ ಚಾರಿಟಿಯ ಕಚೇರಿ ಸೇರಿದಂತೆ, ನಟನಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಸರ್ವೆ ನಡೆಸಿದ್ದಾರೆ.
ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದದ ಕುರಿತಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಒಪ್ಪಂದದ ಮೇಲೆ ತೆರಿಗೆ ವಂಚನೆಯ ಆರೋಪ ಬಂದ ಕಾರಣ ಆ ಕುರಿತು ಸಮೀಕ್ಷೆಯನ್ನು ಆರಂಭಿಸಲಾಗಿದೆ. ಈ ಕಾರ್ಯಾಚರಣೆ ದಾಳಿಯಲ್ಲ, ಕೇವಲ ‘ಸರ್ವೆ’(ಸಮೀಕ್ಷೆ) ಎಂದು ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಎಪಿ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ನಾಂದಿಯಾಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಸೋನು ಸೂದ್ ಭೇಟಿಯಾಗಿದ್ದರು. ಆಗ ಸೋನು ಅವರನ್ನು ‘ದೇಶ್ ಕಾ ಮೆಂಟರ್ಸ್’ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲಾಗಿತ್ತು. ಇದೀಗ ಅವರ ಮನೆಯ ಮೇಲೆ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ ಎಂಬ ವಾದವೂ ಕೇಳಿಬಂದಿದೆ. ಕೇಜ್ರಿವಾಲ್ ಭೇಟಿ ಮುಂದಿನ ಪಂಜಾಬ್ ರಾಜ್ಯದ ಚುನಾವಣೆಯಲ್ಲಿ ಎಎಪಿಯಿಂದ ಸೋನು ನಿಲ್ಲಲಿದ್ದಾರೆ ಎಂಬ ಸುದ್ದಿಯನ್ನು ಹುಟ್ಟುಹಾಕಿತ್ತು.
ಆದರೆ ಸೋನು ಅದನ್ನು ಅಲ್ಲಗಳೆದಿದ್ದರು. ‘ಯಾವುದೇ ರಾಜಕೀಯವನ್ನು ಚರ್ಚಿಸಲಾಗಿಲ್ಲ’ ಎಂದು ಸೋನು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದರು. ಈ ಹಿಂದೆ ಕೂಡ ಸೋನು ಸೂದ್, ತಾವು ರಾಜಕಾರಣಿಗಳಿಂದ ಗೌರವಿಸಲ್ಪಟ್ಟರೂ ಕೂಡ, ಯಾವುದೇ ಪಕ್ಷಕ್ಕೆ ಸಂಬಂಧಪಟ್ಟವನಲ್ಲ ಎಂದು ಹೇಳಿದ್ದರು. ಪ್ರಸ್ತುತ ಎಎಪಿ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಪ್ರತಿಕ್ರಿಯಿಸಿದ್ದು, ‘ಎಎಪಿ ಆರೋಪ ನಿರಾಧಾರ. ಯಾವುದೇ ರಾಜಕೀಯ ಹಿನ್ನೆಲೆ ಈ ಪ್ರಕರಣಕ್ಕಿಲ್ಲ ಎಂದಿದೆ’.
ಕೊರೊನಾ ಸಂಕಷ್ಟದ ಸಮಯದಲ್ಲಿ ಸೋನು ಅವರ ಸಹಾಯ ಕಾರ್ಯ ದೇಶದ ಮನಗೆದ್ದಿತ್ತು. ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ಮತ್ತು ಅಸಹಾಯಕರಾಗಿದ್ದ ನೂರಾರು ವಲಸಿಗರನ್ನು, ಅವರವರ ರಾಜ್ಯಕ್ಕೆ ಕರೆದೊಯ್ಯಲು ಬಸ್‌ಗಳು, ರೈಲುಗಳು ಮತ್ತು ವಿಮಾನಗಳ ವ್ಯವಸ್ಥೆಯನ್ನು ಸೋನು ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಎರಡನೇ ಅಲೆಯಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಸಿ ಆಪದ್ಭಾಂಧವ ಎನಿಸಿಕೊಂಡಿದ್ದರು.
ಇದನ್ನೂ ಓದಿ:
Big Breaking: ಸೋನು ಸೂದ್ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ
Raj Kundra: ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಯುವತಿಯರೇ ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ದಂಧೆಗೆ ಟಾರ್ಗೆಟ್
(IT Officials is in Sonu Sood’s Mumbai home after completing survey in his offices)
Published On - 1:47 pm, Thu, 16 September 21