ಹಿಂದೂಗಳು ಸಹಿಷ್ಣುತೆಯ ಹಾದಿ ಬಿಡಬಾರದು, ಅವರಿಂದಲೇ ಪ್ರಜಾಪ್ರಭುತ್ವ ಉಳಿದಿದೆ: ಜಾವೇದ್ ಅಖ್ತರ್

|

Updated on: Nov 10, 2023 | 6:03 PM

Javed Akhtar: ''ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎನ್ನುವುದು ಹಿಂದೂಗಳ ಕ್ರಮವಲ್ಲ. ಒಂದೊಮ್ಮೆ ಯಾರಾದರೂ ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎಂದು ನಿಮಗೆ ಹೇಳಿಕೊಟ್ಟರೆ ಆತ ತಪ್ಪು ಎಂದೇ ಅರ್ಥ'' ಎಂದಿದ್ದಾರೆ ಬಾಲಿವುಡ್​ನ ಸಿನಿಮಾ ಸಾಹಿತಿ ಜಾವೇದ್ ಅಖ್ತರ್.

ಹಿಂದೂಗಳು ಸಹಿಷ್ಣುತೆಯ ಹಾದಿ ಬಿಡಬಾರದು, ಅವರಿಂದಲೇ ಪ್ರಜಾಪ್ರಭುತ್ವ ಉಳಿದಿದೆ: ಜಾವೇದ್ ಅಖ್ತರ್
ಜಾವೇದ್ ಅಖ್ತರ್
Follow us on

”ರಾಮ ಮತ್ತು ಸೀತೆಯದ್ದು ಅತ್ಯುನ್ನತ ಪ್ರೇಮ” ಎಂದ ಜನಪ್ರಿಯ ಹಿಂದಿ ಸಿನಿಮಾ ಸಾಹಿತಿ ಜಾವೇದ್ ಅಖರ್ (Javed Akhtar),  ಲಂಕೆಯಲ್ಲಿದ್ದ ಸೀತೆಗೆ ರಾಮ, ಹನುಮಂತನ ಮೂಲಕ ಕಳಿಸಿದ ಸಂದೇಶದ ಹಿಂದಿ ತರ್ಜುಮೆಯನ್ನು ಓದಿ ಹೇಳಿದರು. ರಾಮ-ಸೀತೆಯದ್ದು ಬೇರ್ಪಡಿಸಲಾಗದ ಪ್ರೇಮ, ಅವರನ್ನು ಬೇರ್ಪಡುವಂತೆ ಮಾಡಿದ್ದು ರಾವಣ, ಯಾರು ಯಾರನ್ನಾದರೂ ಬೇರ್ಪಡಿಸುತ್ತಾರೋ ಅವರೆಲ್ಲರೂ ರಾವಣರೇ. ಲಖನೌನಲ್ಲಿ ಕೆಲ ವರ್ಷ ನಾನಿದ್ದೆ, ಅಲ್ಲಿ ಸಾಮಾನ್ಯ ಜನ ಎದುರು ಬದುರಾದಾಗ ಗುಡ್ ಮಾರ್ನಿಂಗ್ ಎನ್ನುತ್ತಿರಲಿಲ್ಲ ಬದಲಿಗೆ ‘ಜೈ ಸಿಯಾ-ರಾಮ್’ (ಜೈ ಸೀತಾ ರಾಮ್) ಎನ್ನುತ್ತಿದ್ದರು. ರಾಮ-ಸೀತೆ ಪ್ರೇಮದ ಸಂಕೇತ, ಬಾಂಧವ್ಯದ ಸಂಕೇತ ಎಂದ ಜಾವೇದ್ ಅಖ್ತರ್, ವೇದಿಕೆ ಮೇಲಿಂದ ‘ಜೈ ಸಿಯಾ-ರಾಮ್’ ಘೋಷಣೆ ಕೂಗಿದರು, ಪ್ರೇಕ್ಷಕರು ಅವರನ್ನು ಅನುಸರಿಸಿದರು. ಬಳಿಕ ಇನ್ನು ಮುಂದೆ ‘ಜೈ ಸಿಯಾ ರಾಮ್’ ಎಂದೇ ಘೋಷಣೆ ಕೂಗಿ ಎಂದರು.

ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ರಾಜಕೀಯ ನಾಯಕ ರಾಜ್ ಠಾಕ್ರೆ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾವೇದ್ ಅಖ್ತರ್ ಭಾಷಣದ ಬಳಿಕ ವೇದಿಕೆ ಮೇಲೆ ನಡೆದ ಸಂವಾದದಲ್ಲಿ ‘ಈಗಿನ ಸಮಯದಲ್ಲಿ ಲೇಖಕರಿಗೆ ಇರುವ ಸ್ವಾತಂತ್ರ್ಯದ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ, ”ಈ ಹಿಂದೆಯೂ ಇದನ್ನು ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಭಾರತದಲ್ಲಿ ಅಹಿಷ್ಣುತೆ ಇತ್ತೀಚೆಗೆ ಹೆಚ್ಚಾಗಿದೆ. ಹಿಂದೆ ನಾವು ಅಥವಾ ನಮ್ಮ ಕಾಲಘಟ್ಟದವರು ಯಾವುದೇ ಅಳುಕಿಲ್ಲದೆ ಬರೆದ ದೃಶ್ಯಗಳನ್ನು, ಹಾಡುಗಳನ್ನು ಈಗಿನ ಕಾಲದಲ್ಲಿ ಬರೆಯಲಾಗುವುದಿಲ್ಲ” ಎಂದು ‘ಶೋಲೆ’ ಹಾಗೂ ಕೆಲವು ಸಿನಿಮಾಗಳ ಉದಾಹರಣೆಯನ್ನೂ ನೀಡಿದರು.

ಮುಂದುವರೆದು, ”ಅಸಹಿಷ್ಣುತೆ ಹೆಚ್ಚಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕೆಲವು ಜನರಿದ್ದಾರೆ ಅವರಲ್ಲಿ ಮೊದಲಿನಿಂದ ಅಸಹಿಷ್ಣುತೆ ಇದೆ. ಹಿಂದೂಗಳು ಹಾಗಿರಲಿಲ್ಲ, ಹಿಂದೂಗಳಲ್ಲಿ ಸದಾ ಒಂದು ವಿಶಾಲ ಮನೋಭಾವ, ವಿಸ್ತಾರ ಆಲೋಚನೆ ಇತ್ತು, ಇದೇ ಅವರ ವಿಶೇಷತೆ ಸಹ ಆಗಿತ್ತು. ಆ ಸಹಿಷ್ಣುತೆಯನ್ನು ಬಿಟ್ಟರೆ ಹಿಂದೂಗಳು ಸಹ ಬೇರೆಯವರ ರೀತಿ ಆಗಿಬಿಡುತ್ತಾರೆ ಆ ಬಗ್ಗೆ ಅವರಿಗೆ ಜಾಗೃತೆ ಇರಬೇಕು. ಹಿಂದೂಗಳ ಜೀವನ ಕ್ರಮ ಬಹಳ ಚೆನ್ನಾಗಿದೆ, ಅದರಿಂದ ನಾವು ಕಲಿತಿದ್ದೇವೆ, ಅದನ್ನು ನೀವೇ ಬಿಟ್ಟುಬಿಡುತ್ತೀರೇನು? ಅದು ಸರಿಯಾಗುವುದಿಲ್ಲ” ಎಂದಿದ್ದಾರೆ ಜಾವೇದ್ ಅಖ್ತರ್.

”ಈಗ ಭಾರತದಲ್ಲಿ ಪ್ರಜಾಪ್ರಭುತ್ವ ಇದೆ, ಮುಂದೆ ಏನಾಗುತ್ತದೆಯೋ ನೋಡೋಣ. ನೀವು ಗಮನಿಸಿದರೆ ಭಾರತ ಬಿಟ್ಟರೆ ಇಲ್ಲಿಂದ ಮೆಡಿಟೇರಿಯಸ್ ತೀರದವರೆಗೆ ಇನ್ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ. ಏಕೆಂದರೆ ಇಲ್ಲಿ ಸಹಸ್ರಾರು ವರ್ಷಗಳಿಂದ ವ್ಯಕ್ತಿಗಳ ನಡುವೆ ಭಿನ್ನತೆ ಇರಬಹುದು, ವ್ಯಕ್ತಿ ಆಚರಣೆ, ಆಲೋಚನೆಯಲ್ಲಿ ಭಿನ್ನತೆ ಇಟ್ಟುಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾನೆ ಎಂಬುದನ್ನು ನಾವು ನಂಬಿಕೊಂಡು ಆಚರಿಸಿಕೊಂಡು ಬಂದಿದ್ದೇವೆ. ಈ ಮಣ್ಣಿನ ಆಚರಣೆಗಳೇ ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವಂತೆ ಮಾಡಿದೆ. ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎನ್ನುವುದು ಹಿಂದೂಗಳ ಕ್ರಮವಲ್ಲ. ಒಂದೊಮ್ಮೆ ಯಾರಾದರೂ ನನ್ನ ಆಚರಣೆ ಸರಿ, ಬೇರೆಯವರ ಆಚರಣೆ ತಪ್ಪು ಎಂದು ನಿಮಗೆ ಹೇಳಿಕೊಟ್ಟರೆ ಆತನೇ ತಪ್ಪು ಎಂದು ಅರ್ಥ” ಎಂದಿದ್ದಾರೆ ಜಾವೇದ್ ಅಖ್ತರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Fri, 10 November 23