ಅವರು ಯಾರ ಮನೆ ಬೇಕಿದ್ದರೂ ಪ್ರವೇಶಿಸುವ ಇಲಿಗಳಂತೆ; ಜಯಾ ಬಚ್ಚನ್ ಕೋಪ ಯಾರ ಮೇಲೆ?

ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ಅವರು ಪಾಪರಾಜಿಗಳ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಮಾಧ್ಯಮ ಮತ್ತು ಪಾಪರಾಜಿಗಳನ್ನು ಪ್ರತ್ಯೇಕಿಸಿ ಮಾತನಾಡಿದ ಅವರು, ಪಾಪರಾಜಿಗಳನ್ನು 'ಇಲಿಗಳು' ಎಂದು ಕರೆದಿದ್ದಾರೆ. ಅವರಿಗೆ ಯಾವುದೇ ಗೌರವವಿಲ್ಲ ಎಂದು ಜಯಾ ಹೇಳಿದ್ದಾರೆ. ಯುವ ನಟರು ಪಾಪರಾಜಿಗಳಿಗೆ ಹಣ ನೀಡುತ್ತಾರೆ ಎಂಬ ವರದಿಯನ್ನು ಅವರು ತಳ್ಳಿಹಾಕಿದ್ದಾರೆ.

ಅವರು ಯಾರ ಮನೆ ಬೇಕಿದ್ದರೂ ಪ್ರವೇಶಿಸುವ ಇಲಿಗಳಂತೆ; ಜಯಾ ಬಚ್ಚನ್ ಕೋಪ ಯಾರ ಮೇಲೆ?
ಜಯಾ ಬಚ್ಚನ್
Updated By: ರಾಜೇಶ್ ದುಗ್ಗುಮನೆ

Updated on: Dec 01, 2025 | 12:52 PM

ಬಾಲಿವುಡ್‌ನ ಹಿರಿಯ ನಟಿ, ಸಂಸದೆ ಜಯಾ ಬಚ್ಚನ್ (Jaya Bachchan) ಅವರು ಪಾಪರಾಜಿಗಳನ್ನು ಕಂಡರೆ ಕೆಂಡ ಕಾರುತ್ತಾರೆ. ಪಾಪರಾಜಿಗಳ ಮೇಲೆ ಅವರು ಕೋಪಗೊಳ್ಳುವ ವಿಡಿಯೋ ಹಲವು ಬಾರಿ ವೈರಲ್ ಆಗಿದೆ. ಈ ಬಗ್ಗೆ ಜಯಾ ಬಚ್ಚನ್‌ಗೆ ಪ್ರತಿಕ್ರಿಯಿಸಿದ್ದಾರೆ. ಬರ್ಖಾ ದತ್ ಅವರ ‘ವೀ ದಿ ವುಮೆನ್’ ಕಾರ್ಯಕ್ರಮದಲ್ಲಿ ಪಾಪರಾಜಿಗಳ ಬಗ್ಗೆ ಜಯಾ ಬಚ್ಚನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇದಲ್ಲದೆ, ಅವರು ಮಾಧ್ಯಮದೊಂದಿಗಿನ ತಮ್ಮ ಸಂಬಂಧದ ಬಗ್ಗೆಯೂ ಹೇಳಿದ್ದಾರೆ.

‘ಪಾಪರಾಜಿ ಜೊತೆ ನಿಮ್ಮ ಸಂಬಂಧ ಹೇಗಿದೆ’ ಎಂದು ಜಯಾ ಬಚ್ಚನ್ ಅವರಿಗೆ ಕೇಳಲಾಯಿತು. ಇದಕ್ಕೆ ಅವರು, ‘ಮಾಧ್ಯಮದೊಂದಿಗಿನ ನನ್ನ ಸಂಬಂಧ ತುಂಬಾ ಚೆನ್ನಾಗಿದೆ. ಆದರೆ ಪಾಪರಾಜಿ ಜೊತೆಗಿನ ನನ್ನ ಸಂಬಂಧ ಸಂಪೂರ್ಣವಾಗಿ ಶೂನ್ಯ. ಈ ಜನರು ಯಾರು? ಈ ದೇಶದ ಜನರನ್ನು ಪ್ರತಿನಿಧಿಸಲು ಅವರಿಗೆ ತರಬೇತಿ ನೀಡಲಾಗಿದೆಯೇ? ನೀವು ಅವರನ್ನು ಮಾಧ್ಯಮ ಎಂದು ಕರೆಯುತ್ತೀರಾ? ನಾನು ಮಾಧ್ಯಮದಿಂದ ಬಂದವನು. ನನ್ನ ತಂದೆ ಪತ್ರಕರ್ತರಾಗಿದ್ದರು. ನನಗೆ ಮಾಧ್ಯಮದ ಬಗ್ಗೆ ತುಂಬಾ ಗೌರವವಿದೆ’ ಎಂದು ಹೇಳಿದರು.

‘ಕೊಳಕು ಪ್ಯಾಂಟ್ ಧರಿಸಿ, ಮೊಬೈಲ್ ಫೋನ್ ಹಿಡಿದು ಹೊರಗೆ ನಿಂತಿರುವ ಅವರ ಬಗ್ಗೆ ನನಗೆ ಗೌರವ ಇಲ್ಲ. ನಾವು ಚಿತ್ರಗಳನ್ನು ತೆಗೆಯಬಹುದು ಮತ್ತು ಬೇಡದ ಕಾಮೆಂಟ್‌ಗಳನ್ನು ಮಾಡಬಹುದು ಎಂದು ಅವರು ಭಾವಿಸುತ್ತಾರೆ. ಇವರು ಯಾವ ರೀತಿಯ ಜನರು? ಅವರು ಎಲ್ಲಿಂದ ಬಂದವರು? ಅವರ ಶಿಕ್ಷಣ ಏನು? ಅವರ ಹಿನ್ನೆಲೆ ಏನು? ನಾನು ಯಾವುದೇ ಸಾಮಾಜಿಕ ಜಾಲತಾಣದಲ್ಲಿಲ್ಲ, ಆದ್ದರಿಂದ ನನಗೆ ಅವರ ಬಗ್ಗೆ ಗೊತ್ತಿಲ್ಲ’ ಎಂದಿದ್ದಾರೆ ಜಯಾ.

ಜಯಾ ಬಚ್ಚನ್ ಪಾಪರಾಜಿಗಳನ್ನು ಇಲಿಗಳಿಗೆ ಹೋಲಿಸಿದ್ದಾರೆ. ‘ದೆಹಲಿಯಲ್ಲಿರುವ ನನ್ನ ಸಿಬ್ಬಂದಿಯೊಬ್ಬರು ನಾನು ಸಾಮಾಜಿಕ ಜಾತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತೇನೆ ಎಂದು ಹೇಳಿದರು. ಅದು ನನಗೆ ಮುಖ್ಯವಲ್ಲ ಎಂದು ಹೇಳಿದೆ. ಪಾಪರಾಜಿಗಳು ತಮ್ಮ ಮೊಬೈಲ್ ಫೋನ್‌ಗಳೊಂದಿಗೆ ಯಾರ ಮನೆ ಬೇಕಿದ್ದರೂ ಪ್ರವೇಶಿಸುವ ಇಲಿಗಳಂತೆ’ ಎಂದರು ಜಯಾ.

ಇದನ್ನೂ ಓದಿ: ‘ಬಾಯಿ ಮುಚ್ಕೊಂಡು ಫೋಟೋ ತೆಗೀರಿ ಅಷ್ಟೇ’; ರೇಗಾಡಿದ ಜಯಾ ಬಚ್ಚನ್

ಇಂದಿನ ಅನೇಕ ಯುವ ನಟರು ಪಾಪರಾಜಿಗಳಿಗೆ ಹಣ ಕೊಡುತ್ತಾರೆ ಎಂಬ ಮಾತಿದೆ. ಇದನ್ನು ಜಯಾ ಬಚ್ಚನ್ ಒಪ್ಪಿಲ್ಲ. ‘ನೀವು ಹೇಳುತ್ತಿರುವ ಆ ಸೆಲೆಬ್ರಿಟಿಗಳು ಯಾರೆಂದು ನನಗೆ ತಿಳಿದಿಲ್ಲ. ನನ್ನ ಮೊಮ್ಮಗ (ಅಗಸ್ತ್ಯ ಬಚ್ಚನ್) ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಇಲ್ಲ. ಪಾಪರಾಜಿಗಳಿಗೆ ಕರೆ ಮಾಡಿ ಹಣ ನೀಡುತ್ತೀರಿ ಎಂದರೆ ನೀವು ಯಾವ ರೀತಿಯ ಸೆಲೆಬ್ರಿಟಿ’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.