ಜಿಯಾ ಖಾನ್ (Jiah Khan) ಅವರು ಆತ್ಮಹತ್ಯೆ ಮಾಡಿಕೊಂಡು 10 ವರ್ಷ ಕಳೆಯುತ್ತಾ ಬಂದಿದೆ. 2013ರ ಜೂನ್ 3ರಂದು ಮುಂಬೈನ ನಿವಾಸದಲ್ಲಿ ಜಿಯಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಜಿಯಾ ತಾಯಿ ರಬಿಯಾ ಖಾನ್ (Rabia Khan) ಅವರು ಆರೋಪ ಮಾಡುತ್ತಲೇ ಬಂದಿದ್ದರು. ಜಿಯಾ ಬಾಯ್ಫ್ರೆಂಡ್ ಸೂರಜ್ ಪಾಂಚೋಲಿ ಮೇಲೆ ಅವರು ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವನ್ನು ರೀ-ಓಪನ್ ಮಾಡುವಂತೆ ರಬಿಯಾ ಹೈಕೋರ್ಟ್ನಲ್ಲಿ ಕೋರಿದ್ದರು. ಆದರೆ, ಇದನ್ನು ಕೋರ್ಟ್ ನಿರಾಕರಿಸಿದೆ.
ಜಿಯಾ ಹಾಗೂ ಸೂರಜ್ ಪರಸ್ಪರ ಪ್ರೀತಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬಾಯ್ಫ್ರೆಂಡ್ ಬಗ್ಗೆ ರಬಿಯಾಗೆ ಅನುಮಾನ ಮೂಡಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಆತ್ಮಹತ್ಯೆ ಎಂದು ವರದಿ ನೀಡಿತ್ತು. ‘ತನಿಖಾ ವರದಿಯಲ್ಲಿ ತಪ್ಪಿದೆ. ಈ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕು. ಮಗಳ ಸಾವಿಗೆ ನ್ಯಾಯ ಸಿಗಬೇಕು’ ಎಂದು ರಬಿಯಾ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಶೇಷ ಎಂದರೆ ಅಮೆರಿಕದ ಎಫ್ಬಿಐ ಸಹಾಯದೊಂದಿಗೆ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಬೇಕು ಎಂಬುದಾಗಿಯೂ ಅವರು ಅರ್ಜಿಯಲ್ಲಿ ಕೋರಿದ್ದರು.
‘ಮುಂಬೈ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಪ್ಪುಗಳಿದ್ದವು. ಈ ಪ್ರಕರಣ ನಂತರ ಸಿಬಿಐಗೆ ಹಸ್ತಾಂತರ ಆಯಿತು. ಸಿಬಿಐ ಸಮಿತಿ ಕೂಡ ತನ್ನ ವರದಿಯಲ್ಲಿ ಅದೇ ಮಾದರಿಯ ತಪ್ಪನ್ನು ಮಾಡಿದೆ. ಈ ಕಾರಣದಿಂದ ಪ್ರಕರಣದಲ್ಲಿ ಮರುತನಿಖೆ ಆಗಬೇಕು’ ಎಂದು ರಬಿಯಾ ಪರ ವಕೀಲರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
‘ನಮಗೆ ಸಿಬಿಐ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ರಬಿಯಾ ಅವರು ಪ್ರಕರಣವನ್ನು ಮತ್ತಷ್ಟು ದುರ್ಬಲ ಮಾಡುತ್ತಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಹಾಗೂ ಎಂಎನ್ ಜಾಧವ್ ಹೇಳಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಜತೆ ತೆರೆ ಹಂಚಿಕೊಂಡ ಈ ನಟಿ ಈಗ ಹೇಗಾಗಿದ್ದಾರೆ ನೋಡಿ
ಜಿಯಾ ಖಾನ್ ಅವರು ಬಾಲಿವುಡ್ಗೆ ಎಂಟ್ರಿ ನೀಡಿದ್ದು 2007ರಲ್ಲಿ. ಅಮಿತಾಭ್ ಬಚ್ಚನ್ ನಟನೆಯ ‘ನಿಶಬ್ದ’ ಅವರ ಮೊದಲ ಸಿನಿಮಾ. ನಂತರ ಆಮಿರ್ ಖಾನ್ ನಟನೆಯ ‘ಗಜನಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2010ರಲ್ಲಿ ತೆರೆಗೆ ಬಂದ ‘ಹೌಸ್ಫುಲ್’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಇದು ಅವರ ಕೊನೆಯ ಸಿನಿಮಾ.
Published On - 4:06 pm, Tue, 13 September 22