ಬಾಲಿವುಡ್ ನಟ, ನಟಿಯರು ತಮ್ಮ ಕುಟುಂಬದವರಿಗೆ, ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೂ ನೀಡದಷ್ಟು ಗೌರವವನ್ನು ಪಾಪರಾಟ್ಜಿಗಳಿಗೆ ನೀಡುತ್ತಾರೆ. ಕ್ಯಾಮೆರಾ ಹಿಡಿದು ಸದಾ ನಟ-ನಟಿಯರ ಹಿಂದೆ ಓಡಾಡುವ ಪಾಪರಾಟ್ಜಿಗಳು ಪತ್ರಕರ್ತರೂ ಸಹ ಅಲ್ಲ, ಕೇವಲ ಸೆಲೆಬ್ರಿಟಿಗಳ ಫೋಟೊ ತೆಗೆದು ಅದನ್ನು ಮ್ಯಾಗಜೀನ್ಗಳಿಗೆ ಮಾರುತ್ತಾರೆ ಅಥವಾ ತಾವೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರಿಗೆ ಬಾಲಿವುಡ್ನಲ್ಲಿ ಭಾರಿ ಗೌರವ. ಬಾಲಿವುಡ್ ನಟ-ನಟಿಯರು ಪಾಪರಾಟ್ಜಿಗಳಿಗೆ ಬಹಳ ಹೆದರುತ್ತಾರೆ. ಪಾಪರಾಟ್ಜಿಗಳು ಬಾಲಿವುಡ್ನ ಭಾಗವೇ ಆಗಿಬಿಟ್ಟಿದ್ದಾರೆ. ಇವರಿಗೆ ಬಾಲಿವುಡ್ ನಟ, ನಟಿ, ನಿರ್ಮಾಪಕರುಗಳು ಹಬ್ಬಕ್ಕೆ ಉಡುಗೊರೆ, ಹಣ ಎಲ್ಲವನ್ನೂ ನೀಡುವ ಸಂಪ್ರದಾಯವೂ ಇದೆ.
ಸಾಮಾನ್ಯವಾಗಿ ಎಲ್ಲರೂ ಗೌರವಿಸುವ ಪಾಪರಾಟ್ಜಿಗಳ ವಿರುದ್ಧ ನಟಿ ಕಾಜೋಲ್ ಸಾರ್ವಜನಿಕವಾಗಿಯೇ ಕೂಗಾಡಿದ್ದಾರೆ. ಸಾಮಾನ್ಯವಾಗಿ ವಿವಾದಗಳಿಂದ ಬಹಳ ದೂರ ಇರುವ, ಅಪರೂಪಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೂ ಸಹ ಎಲ್ಲರನ್ನೂ ನಗಿಸುತ್ತಾ, ತಾವೂ ನಗುತ್ತಾ ಇರುವ ಹಾಸ್ಯ ಪ್ರವೃತ್ತಿಯ ನಟಿ ಕಾಜೋಲ್ ಸಾರ್ವಜನಿಕವಾಗಿ ಸಿಟ್ಟು ಮಾಡಿಕೊಂಡಿದ್ದು ನೋಡಿದ್ದಿಲ್ಲ. ಆದರೆ ಇದೀಗ ಏಕಾ-ಏಕಿ ಪಾಪರಾಟ್ಜಿಗಳ ಮೇಲೆ ಕೂಗಾಡಿದ್ದಾರೆ. ಅದೂ ಬೆರಳು ತೋರಿಸಿ, ಚಿಟಿಕೆ ಹೊಡೆದು ‘ನಡೆಯಿರಿ ಹೊರಗೆ’ ಎಂದು ಅಬ್ಬರಿಸಿದ್ದಾರೆ. ಸದಾ ನಗುತ್ತಿರುವ ಕಾಜೋಲ್ಗೆ ಇಷ್ಟು ಸಿಟ್ಟು ಬರಲು ಏನು ಕಾರಣ, ಈ ಪಾಪರಾಟ್ಜಿಗಳು ಅಂಥಹದ್ದೇನು ಮಾಡಿದರು?
ನಟಿ ಕಾಜೋಲ್ ಮೂಲತಃ ಬೆಂಗಾಲಿ. ಅವರು ಪ್ರತಿ ವರ್ಷವೂ ತಮ್ಮ ಕುಟುಂಬದೊಟ್ಟಿಗೆ ಸೇರಿಕೊಂಡು ದುರ್ಗಾ ಪೂಜೆ ಮಾಡುತ್ತಾರೆ. ಈ ವರ್ಷವೂ ಸಹ ತಮ್ಮ ತಾಯಿ, ಸಹೋದರಿ ಇನ್ನಿತರೆ ಸಂಬಂಧಿಗಳೊಡನೆ ಸಾರ್ವಜನಿಕ ದುರ್ಗಾ ಪೂಜೆಗೆ ತೆರಳಿದ್ದರು. ದುರ್ಗಾ ಪೂಜೆಗೆ ಕಾಜೋಲ್ ಬರುವುದು ತಿಳಿದಿದ್ದ ಪಾಪರಾಟ್ಜಿಗಳು ಮೊದಲೇ ದುರ್ಗಾ ಪೂಜಾ ಕಾರ್ಯಕ್ರಮದ ಬಳಿ ನೆರೆದಿದ್ದರು. ದುರ್ಗಾ ದೇವಿ ವಿಗ್ರಹದ ಮುಂದೆ ಕಾಜೋಲ್ ಮತ್ತು ಕುಟುಂಬದವರು ಪೂಜೆಗಾಗಿ ನಿಂತಿದ್ದರು. ಈ ಸಮಯದಲ್ಲಿ ಮುಂದಿನಿಂದ ಫೋಟೊ ತೆಗೆಯಲೆಂದು ಪಾಪರಾಟ್ಜಿಗಳ ದೊಡ್ಡ ಗುಂಪು ದುರ್ಗಾ ವಿಗ್ರಹದ ಕಡೆಗೆ ಬಂತು. ಇದನ್ನು ಕಂಡು ಕಾಜೋಲ್ ಒಮ್ಮೆಗೆ ಸಿಟ್ಟಿಗೆದ್ದರು.
ಇದನ್ನೂ ಓದಿ:‘ಕಂಗನಾ ಫೈಟರ್’: ನಟಿಯನ್ನು ಹಾಡಿ ಹೊಗಳಿದ ಬಾಲಿವುಡ್ ನಾಯಕಿ
‘ಏಯ್ ಬನ್ನಿ ಈ ಕಡೆ, ಏನೆಂದು ತಿಳಿದಿದ್ದೀರಿ, ದೇವಿಯ ವಿಗ್ರಹ ಇದೆ ಅಲ್ಲಿ. ಶೂ ಹಾಕಿಕೊಂಡು ಅಲ್ಲಿ ಹೋಗಲು ಎಷ್ಟು ಧೈರ್ಯ ನಿಮಗೆ, ಈ ಕಡೆ ಬನ್ನಿ, ದೇವರ ಪೀಠದ ಮೇಲೆ ಶೂ ಧರಿಸಿ ಹತ್ತುತ್ತೀರ?’ ಎಂದು ಗದರಿ ಎಲ್ಲರನ್ನೂ ಅಲ್ಲಿಂದ ಕೆಳಗೆ ಇಳಿಸಿದರು. ಅಷ್ಟಕ್ಕೆ ಸುಮ್ಮನಾಗದೆ ಆ ನಂತರ ಮೈಕ್ ಕೈಗೆತ್ತಿಕೊಂಡು ‘ಇಲ್ಲಿ ಪೂಜೆ ನಡೆಯುತ್ತಿದೆ ಅದಕ್ಕೆ ಗೌರವ ಇರಲಿ, ಯಾರು ಯಾರು ಶೂ ಧರಿಸಿದ್ದೀರೊ ಅವರೆಲ್ಲ ವಿಗ್ರಹದಿಂದ, ದೇವರು ಕೂರಿಸುವ ವೇದಿಕೆಯಿಂದ ದೂರ ಹೋಗಿ, ಇಲ್ಲಿ ಪೂಜೆ ನಡೆಯುತ್ತಿದೆ, ಅದಕ್ಕೆ ಗೌರವ ನೀಡಿ’ ಎಂದು ಕಟುವಾಗಿ ಹೇಳಿದರು.
ಕಾಜೋಲ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಾಜೋಲ್ ತೋರಿದ ಧೈರ್ಯವನ್ನು ನೆಟ್ಟಿಗರು ಮೆಚ್ಚಿ ಕೊಂಡಾಡುತ್ತಿದ್ದಾರೆ. ನಿಜವಾಗಿಯೂ ದೇವರ ಬಗ್ಗೆ ಗೌರವ ಇದೆ ಕಾಜೋಲ್ಗೆ ಎಂದು ಕೊಂಡಾಡಿದ್ದಾರೆ. ಕೆಲವು ನಟ-ನಟಿಯರು ಪಾಪರಾಟ್ಜಿಗಳು ಫೋಟೊ, ವಿಡಿಯೋ ತೆಗೆಯಲೆಂದೇ ಸಾರ್ವಜನಿಕ ಪೂಜೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ಕಾಜೋಲ್, ಪೂಜೆ ಮಾಡಲೆಂದು ಪಾಪರಾಟ್ಜಿಗಳನ್ನು ಹೊರಗೆ ಕಳಿಸಿದ್ದು, ಅದರಲ್ಲಿಯೂ ಶೂ ಧರಿಸಿ ಬಂದವರನ್ನು ತರಾಟೆಗೆ ತೆಗೆದುಕೊಂಡದ್ದು ಪ್ರಶಂಸೆಗೆ ಪಾತ್ರವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ