
ಮದುವೆ ಆದ ಬಳಿಕ ನಟಿಯರು ಚಿತ್ರರಂಗದಲ್ಲಿ ಹಿನ್ನೆಲೆಗೆ ಸರಿಯುತ್ತಾರೆ ಎಂಬ ಮಾತಿತ್ತು. ಆದರೆ ನಂತರದ ದಿನಗಳಲ್ಲಿ ಕಾಲ ಬದಲಾಯಿತು. ಅನೇಕ ಸ್ಟಾರ್ ನಟಿಯರು ಮದುವೆ, ಮಕ್ಕಳು ಆದ ಬಳಿಕವೂ ಹೀರೋಯಿನ್ ಆಗಿಯೇ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಹಲವು ನಟಿಯರು ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ. ವಿದ್ಯಾ ಬಾಲನ್, ರಾಣಿ ಮುಖರ್ಜಿ, ಕಾಜೋಲ್ ಮುಂತಾದ ನಟಿಯರು ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುವ ಸ್ಕ್ರಿಪ್ಟ್ಗಳು ಕೂಡ ಭಿನ್ನವಾಗಿವೆ. ಈಗ ಕಾಜೋಲ್ (Kajol) ಅವರು ಹೊಸ ಸಿನಿಮಾದ ಕೆಲಸದಲ್ಲಿ ಭಾಗಿ ಆಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕಿ ರೇವತಿ ಅವರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾಗೆ ‘ಸಲಾಂ ವೆಂಕಿ’ (Salaam Venky Movie) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಶೂಟಿಂಗ್ ಆರಂಭವಾಗಿದ್ದು, ಮುಹೂರ್ತದ ಕೆಲವು ಫೋಟೋಗಳನ್ನು ಕಾಜೋಲ್ ಶೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅವರಿಗೆ ಹೆಚ್ಚು ಉತ್ಸಾಹ ಇದೆ. ಆ ಬಗ್ಗೆ ಅವರು ಬರೆದುಕೊಂಡಿದ್ದಾರೆ. ರೇವತಿ (Director Revathy) ಮತ್ತು ಕಾಜೋಲ್ ಕಾಂಬಿನೇಷನ್ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ.
ನೈಜ ಘಟನೆ ಆಧಾರಿತವಾಗಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಫ್ ಬೀಟ್ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಕಾಜೋಲ್ ಅವರು ಈಗ ‘ಸಲಾಮ್ ವೆಂಕಿ’ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಹೇಳಲೇಬೇಕಾದ ಒಂದು ಕಥೆಯ ಪಯಣವನ್ನು ನಾವಿಂದು ಆರಂಭಿಸಿದ್ದೇವೆ. ನಂಬಲು ಅಸಾಧ್ಯವಾದ ನೈಜ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಕಾದಿದ್ದೇವೆ’ ಎಂದು ಕಾಜೋಲ್ ಟ್ವೀಟ್ ಮಾಡಿದ್ದಾರೆ.
ಸೂರಜ್ ಸಿಂಗ್, ಶ್ರದ್ಧಾ ಅಗರ್ವಾಲ್, ವರ್ಷಾ ಕುಕ್ರೇಜಾ ಅವರು ‘ಸಲಾಮ್ ವೆಂಕಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಹಂತದ ಶೂಟಿಂಗ್ಗೆ ಚಾಲನೆ ನೀಡಲಾಗಿದೆ. ಜೀವನದಲ್ಲಿ ಅಸಾಧಾರಣ ಸವಾಲುಗಳನ್ನು ಎದುರಿಸಿದ ತಾಯಿಯೊಬ್ಬಳ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತದೆ. ಸದ್ಯಕ್ಕೆ ‘ಸಲಾಮ್ ವೆಂಕಿ’ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಕಾಜೋಲ್ ಅವರ ಈ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಭಿನ್ನವಾದ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ರೇವತಿ ಗುರುತಿಸಿಕೊಂಡಿದ್ದಾರೆ. ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇಂಥ ಪ್ರತಿಭಾವಂತ ನಿರ್ದೇಶಕಿಯ ಜೊತೆ ಕಾಜೋಲ್ ಕೈ ಜೋಡಿಸಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಕಾಜೋಲ್ ನಟಿಸಿದ್ದ ‘ತ್ರಿಭಂಗ’ ಸಿನಿಮಾ ಕಳೆದ ವರ್ಷ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿತ್ತು. ಆ ಚಿತ್ರಕ್ಕೆ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿರುವ ಕಾಜೋಲ್ ಅವರು ಈಗ ‘ಸಲಾಮ್ ವೆಂಕಿ’ ಚಿತ್ರ ಆಯ್ಕೆ ಮಾಡಿಕೊಂಡಿರುವುದರಿಂದ ನಿರೀಕ್ಷೆ ಸೃಷ್ಟಿ ಆಗಿದೆ.
ಇದನ್ನೂ ಓದಿ:
ಈ ಕೆಟ್ಟ ಚಟ ಬಿಡೋಕೆ ತುಂಬಾನೇ ಪ್ರಯತ್ನಿಸುತ್ತಿದ್ದಾರೆ ನಟಿ ಕಾಜೋಲ್
ಬಾಲಿವುಡ್ನಲ್ಲಿ ಲಿಂಗ ತಾರತಮ್ಯ; ಸ್ಟಾರ್ ನಟರಿಂದ ವಿದ್ಯಾ ಬಾಲನ್ಗೆ ಈ ಒಂದು ಕಷ್ಟ ತಪ್ಪಿರಲಿಲ್ಲ