ನಟಿ ಕಂಗನಾ ರಣಾವತ್ (Kangana Ranaut) ಅವರು ಸಿನಿಮಾ ಮಾತ್ರವಲ್ಲದೇ ಇತರೆ ಅನೇಕ ಕಾರಣಗಳಿಂದಲೂ ಸುದ್ದಿ ಆಗುತ್ತಾರೆ. ಈಗ ಅವರೊಂದು ಪೋಸ್ಟ್ ಮಾಡಿದ್ದು, ಯುವತಿಯೊಬ್ಬರ ಬಟ್ಟೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ಸರಿಯಾಗಿ ಬಟ್ಟೆ ಧರಿಸಿಕೊಂಡು ಬರಬೇಕು ಎಂದು ಕಂಗನಾ ಅವರು ವಾದಿಸಿದ್ದಾರೆ. ಅವರ ಈ ಅಭಿಪ್ರಾಯದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ಹಿಮಾಚಲ ಪ್ರದೇಶದ ಬೈಜನಾಥ್ ದೇವಸ್ಥಾನಕ್ಕೆ ಬಂದ ಯುವತಿಯು ಚಿಕ್ಕ ಬಟ್ಟೆ ಧರಿಸಿದ್ದರು. ಆ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ಅವರು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ. ‘ನೈಟ್ ಡ್ರೆಸ್ ಧರಿಸಿದ ಈ ಕೋಡಂಗಿಗಳು ಇದನ್ನೇ ಸಹಜವಾದ ಬಟ್ಟೆ ಎಂದುಕೊಳ್ಳುತ್ತಾರೆ. ಇಂಥವರು ಸೋಮಾರಿಗಳಲ್ಲದೇ ಮತ್ತೇನೂ ಅಲ್ಲ. ಅದನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಉದ್ದೇಶ ಇರುತ್ತದೆ ಅಂತ ನನಗೆ ಅನಿಸಲ್ಲ. ಇಂಥ ಮೂರ್ಖರಿಗಾಗಿ ಕಠಿಣ ನಿಯಮ ಇರಬೇಕು’ ಎಂದು ಕಂಗನಾ ರಣಾವತ್ ಅವರು ಟ್ವೀಟ್ (Kangana Ranaut Tweet) ಮಾಡಿದ್ದಾರೆ.
‘ಇವೆಲ್ಲವೂ ಪಾಶ್ಚಿಮಾತ್ಯ ಜನರು ಸಿದ್ಧಪಡಿಸಿದ ಮತ್ತು ಪ್ರಮೋಟ್ ಮಾಡಿದ ಬಟ್ಟೆಗಳು. ನಾನು ಒಮ್ಮೆ ವ್ಯಾಟಿಕನ್ ಸಿಟಿಗೆ ಹೋಗಿದ್ದೆ. ಶಾರ್ಟ್ಸ್ ಮತ್ತು ಟಿ ಶರ್ಟ್ ಧರಿಸಿದ್ದಕ್ಕೆ ನನ್ನನ್ನು ಒಳಗೆ ಬಿಡಲಿಲ್ಲ. ನಾನು ವಾಪಸ್ ಹೋಟೆಲ್ಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕಾಯಿತು’ ಎಂದು ಕಂಗನಾ ರಣಾವತ್ ಅವರು ಟ್ವೀಟ್ ಮಾಡಿದ್ದಾರೆ. ಕೆಲವರು ಕಂಗನಾ ಮಾತಿಗೆ ಸಹಮತ ಸೂಚಿಸಿದ್ದಾರೆ. ಆದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಇದು ಬರೀ ಬೂಟಾಟಿಕೆ. ನೀವು ಸಿನಿಮಾದಲ್ಲಿ ಇಂಥ ಬಟ್ಟೆಗಳನ್ನು ಪ್ರಮೋಟ್ ಮಾಡುತ್ತೀರಿ. ಅದನ್ನೇ ಜನರು ಹಾಕಿಕೊಂಡಾಗ ನಿಮಗೆ ತೊಂದರೆ ಆಗುತ್ತದೆ’ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ. ‘ಈಗ ಸ್ತ್ರೀವಾದಿಗಳೆಲ್ಲ ಬಂದು ಬಿಡುತ್ತಾರೆ ನೋಡಿ..’ ಎಂಬ ಕಮೆಂಟ್ ಕೂಡ ಬಂದಿದೆ.
These are western clothes, invented and promoted by white people, I was once at the Vatican wearing shorts and t shirt, I wasn’t even allowed in the premises, I had to go back to my hotel and change…. These clowns who wear night dresses like they are casuals are nothing but lazy… https://t.co/EtPssi3ZZj
— Kangana Ranaut (@KanganaTeam) May 26, 2023
ಇತ್ತೀಚೆಗೆ ವಿಜಯೇಂದ್ರ ಪ್ರಸಾದ್, ಕಂಗನಾ ರಣಾವತ್ ಮುಂತಾದವರು ಕೇದರನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಕಂಗನಾ ರಣಾವತ್ ಫ್ಯಾನ್ಸ್ ಖಾತೆಗಳಲ್ಲಿ ಈ ಫೋಟೋಗಳು ವೈರಲ್ ಆಗಿತ್ತು. ವಿಶೇಷವಾದ ವಿಡಿಯೋವನ್ನು ಕೂಡ ಕಂಗನಾ ಅವರು ಹಂಚಿಕೊಂಡಿದ್ದರು. ಇದರಲ್ಲಿ ಅವರು ‘ಹರ ಹರ ಮಹದೇವ’ ಎಂದು ಶಿವನ ಸ್ಮರಣೆ ಮಾಡಿದ್ದರು. ದೇವರ ಬಗ್ಗೆ ಕಂಗನಾ ರಣಾವತ್ ಅವರಿಗೆ ತುಂಬ ಭಕ್ತಿ ಇದೆ. ಹಬ್ಬಗಳನ್ನು ಅವರು ಶ್ರದ್ಧೆಯಿಂದ ಆಚರಿಸುತ್ತಾರೆ. ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ‘ಅಂತೂ ಇವತ್ತು ಕೇದಾರನಾಥದಲ್ಲಿ ದೇವರ ದರ್ಶನ ಆಯಿತು. ಅದು ಕೂಡ ಪೂಜ್ಯರಾದ ಕೈಲಾಸಾನಂದ ಮಹಾರಾಜ್ ಮತ್ತು ವಿಜಯೇಂದ್ರ ಪ್ರಸಾದ್ ಅವರ ಜೊತೆ. ಧನ್ಯವಾದಗಳು ಉಮೇಶ್ ಅಣ್ಣ’ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ ಓದಿ: Kangana Ranaut: ಕಂಗನಾ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾ ವೀಕ್ಷಿಸಿ ಕಣ್ಣೀರು ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್
ಕಂಗನಾ ರಣಾವತ್ ಅವರು ‘ಎಮರ್ಜೆನ್ಸಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಗನಾ ರಣಾವತ್ ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ವಿಶೇಷ ಎಂದರೆ ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದ್ದಾರೆ. ಅವರಿಗೆ ಈ ಸಿನಿಮಾ ಇಷ್ಟವಾಗಿದೆ. ಅಷ್ಟೇ ಅಲ್ಲ ಅನೇಕ ದೃಶ್ಯಗಳನ್ನು ನೋಡಿ ಅವರು ಕಣ್ಣೀರು ಹಾಕಿದ್ದಾರೆ ಎಂಬ ವಿಚಾರವನ್ನು ಸ್ವತಃ ಕಂಗನಾ ರಣಾವತ್ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.