ಕಂಗನಾ ಮದುವೆಗೆ ಕೋರ್ಟ್ ಕೇಸ್​ಗಳ ವಿಘ್ನ; ಪೊಲೀಸ್ ಕಂಡು ಓಡಿಹೋದ ಗಂಡಿನ ಕಡೆಯವರು

ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಕಂಗನಾ ರಣಾವತ್​ ಅವರು ಸಕ್ರಿಯರಾಗಿದ್ದಾರೆ. ಹಾಗಾದರೆ ಅವರು ಸಿನಿಮಾ ನಟನನ್ನು ಮದುವೆ ಆಗುತ್ತಾರಾ ಅಥವಾ ರಾಜಕಾರಣಿಯನ್ನು ಮದುವೆ ಆಗುತ್ತಾರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡುವಾಗ ಒಂದು ಇಂಟರೆಸ್ಟಿಂಗ್​ ಘಟನೆಯನ್ನು ನೆನಪಿಸಿಕೊಂಡರು. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಂಗನಾ ಮದುವೆಗೆ ಕೋರ್ಟ್ ಕೇಸ್​ಗಳ ವಿಘ್ನ; ಪೊಲೀಸ್ ಕಂಡು ಓಡಿಹೋದ ಗಂಡಿನ ಕಡೆಯವರು
ಕಂಗನಾ ರಣಾವತ್​

Updated on: Sep 01, 2024 | 5:54 PM

ನಟಿ ಕಂಗನಾ ರಣಾವತ್​ ಅವರಿಗೆ ಈಗ 38 ವರ್ಷ ವಯಸ್ಸು. ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಅವರು ರಾಜಕೀಯದಲ್ಲೂ ಗೆದ್ದು ತೋರಿಸಿದ್ದಾರೆ. ಹಾಗಾದ್ರೆ ಕಂಗನಾ ಅವರು ಮದುವೆ ಆಗುವುದು ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇದೆ. ‘ಆಪ್​ ಕಿ ಅದಾಲತ್​’ ಹೊಸ ಸಂಚಿಕೆಯಲ್ಲಿ ಕಂಗನಾಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ವಿವರವಾಗಿ ಉತ್ತರ ನೀಡಿದ್ದಾರೆ. ತಮ್ಮ ಮದುವೆಗೆ ಕೋರ್ಟ್​ ಕೇಸ್​ಗಳು ಅಡ್ಡಿಯಾಗಿವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಒಂದು ಅಚ್ಚರಿಯ ಘಟನೆಯನ್ನು ಕೂಡ ಕಂಗನಾ ರಣಾವತ್​ ನೆನಪಿಸಿಕೊಂಡಿದ್ದಾರೆ.

‘ಮದುವೆ ಬಗ್ಗೆ ನಾನೇನು ಹೇಳಲಿ. ಮದುವೆ ಕುರಿತು ನನ್ನ ಒಳ್ಳೆಯ ಅಭಿಪ್ರಾಯ ಇದೆ. ಎಲ್ಲರಿಗೂ ಸಂಗಾತಿ ಬೇಕು. ಮಕ್ಕಳು ಕೂಡ ಆಗಬೇಕು. ಜನರು ನನ್ನ ಹೆಸರನ್ನು ಎಷ್ಟು ಕೆಡಿಸಿದ್ದಾರೆ ಎಂದರೆ, ನನಗೆ ಮದುವೆ ಆಗಲು ಸಾಧ್ಯವಾಗುತ್ತಿಲ್ಲ. ಯಾರ ಜೊತೆಗಾದರೂ ನನ್ನ ಮದುವೆ ಮಾತುಕತೆ ನಡೆಯುತ್ತಿದೆ ಎನ್ನುವಾಗಲೆಲ್ಲ ಕೋರ್ಟ್​ ಕೇಸ್​ಗಳು ಬರುತ್ತವೆ’ ಎಂದು ಕಂಗನಾ ಹೇಳಿದ್ದಾರೆ.

‘ಪೊಲೀಸರು ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಒಮ್ಮೆಯಂತೂ ಗಂಡಿನ ಕಡೆಯವರು ನಮ್ಮ ಮನೆಯಲ್ಲಿ ಇದ್ದಾಗಲೇ ಸಮನ್ಸ್​ ಬಂತು. ಅದನ್ನು ಕಂಡು ಗಂಡಿನ ಕಡೆಯವರು ಓಡಿಹೋದರು. ಇದು ಕೂಡ ಒಂದು ಸೈಡ್​ ಎಫೆಕ್ಟ್​. ಇಲ್ಲ.. ನಾನು ತಮಾಷೆ ಮಾಡಿದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ಆದಷ್ಟು ಬೇಗ ಅವರು ಮದುವೆ ಆಗಲಿ ಎಂದು ಫ್ಯಾನ್ಸ್​ ಬಯಸಿದ್ದಾರೆ.

ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್​ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ

ಕಂಗನಾ ರಣಾವತ್​ ನಟನೆಯ ಹೊಸ ಸಿನಿಮಾ ‘ಎಮರ್ಜೆನ್ಸಿ’ ಬಿಡುಗಡೆ ಸಜ್ಜಾಗಿದೆ. ಸೆಪ್ಟೆಂಬರ್​ 6ರಂದು ಈ ಸಿನಿಮಾ ರಿಲೀಸ್​ ಆಗಬೇಕಿದೆ. ಆದರೆ ಚಿತ್ರಕ್ಕೆ ಸೆನ್ಸಾರ್​ ಸಮಸ್ಯೆ ಎದುರಾಗಿದೆ. ಈ ಸಿನಿಮಾಗೆ ಸ್ವತಃ ಕಂಗನಾ ರಣಾವತ್​ ಅವರೇ ನಿರ್ದೇಶನ ಮಾಡಿದ್ದಾರೆ. ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಕಂಗನಾ ಜೊತೆ ಅನುಪಮ್​ ಖೇರ್​, ಶ್ರೇಯಸ್​ ತಲ್ಪಡೆ, ಮಿಲಿಂದ್​ ಸೋಮನ್ ಮುಂತಾದ ಕಲಾವಿದರು ನಟಿಸಿದ್ದಾರೆ. ಬಿಡುಗಡೆ ಬಳಿಕ ಸಿನಿಮಾದಿಂದ ಒಂದಷ್ಟು ವಿವಾದ ಹುಟ್ಟಿಕೊಂಡರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.